ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಳ್ಳಾಲ ಶಾಖೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ 111ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರವು ಉಳ್ಳಾಲ ನಗರಸಭೆ ಆವರಣದ ಸಮುದಾಯ ಭವನದಲ್ಲಿ ನಡೆಯಿತು.
ಕಣಚೂರು ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್ ಹಾಗೂ ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಮಂಗಳೂರು ಸಂಸ್ಥೆಗಳ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಸೇವೆ ನೀಡಿತು.
ಶಿಬಿರವನ್ನು ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕರ್ನಾವರ್ ಯಾನೆ ಬಾಲಕೃಷ್ಣ ಉಳ್ಳಾಲ್ ಉದ್ಘಾಟಿಸಿದರು. ಕಳೆದ 11 ವರ್ಷಗಳಿಂದ ಉಳ್ಳಾಲ ಭಾಗದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಮಾಜಮುಖಿ ಕಾರ್ಯಗಳು ಶ್ಲಾಘನೀಯವಾಗಿದ್ದು, ಶಿಬಿರದ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರಣ್ಯ ಕಲಾವೃಂದ ಉಳ್ಳಾಲದ ಮಾಜಿ ಅಧ್ಯಕ್ಷ ರವೀಂದ್ರ ರಾಜ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಅವರ ತತ್ವ ಮತ್ತು ಆದರ್ಶಗಳಿಂದ ಪ್ರೇರಿತವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಗೊಂಡಿದ್ದು, ಚಿತ್ತರಂಜನ್ ಬೋಳಾರ್ ನೇತೃತ್ವದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನ ಸಾರ್ವಜನಿಕ ಆರೋಗ್ಯ ದಂತ ವಿಭಾಗದ ವೈದ್ಯ ಫಿರ್ದೋಸ್ ಖಾನ್ ಮಾತನಾಡಿ, ಶಿಬಿರದಲ್ಲಿ ಉಚಿತ ದಂತ ತಪಾಸಣೆ, ಸಲಹೆ, ಹಲ್ಲುಗಳ ಶುಚೀಕರಣ, ಸಣ್ಣ ಪ್ರಮಾಣದ ಭರ್ತಿ ಚಿಕಿತ್ಸೆ, ಹಲ್ಲು ಕೀಳುವ ಚಿಕಿತ್ಸೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಾಗುತ್ತಿದ್ದು, ಸಾರ್ವಜನಿಕರು ಇಂತಹ ಶಿಬಿರಗಳ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ನೇತ್ರ ವಿಭಾಗದ ಮುಖ್ಯಸ್ಥ ಬದ್ರಿನಾಥ್ ತಲ್ವಾರ್ ಮಾತನಾಡಿ, ಆರೋಗ್ಯ ವಿಮೆಯನ್ನು ಚಿಕ್ಕ ವಯಸ್ಸಿನಲ್ಲೇ ಮಾಡಿಸಿಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಅಗತ್ಯವಿರುವವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ ಹಾಗೂ ಸಾಮಾನ್ಯ ವೈದ್ಯಕೀಯ ಸಮಾಲೋಚನೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಂಘವು ಪ್ರತಿವರ್ಷ ಶಾಖೆಗಳ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದು ಸಂಘದ 111ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಉಚಿತ ಬಸ್ ತಂಗುದಾಣ ನಿರ್ಮಾಣ, ಕಡುಬಡವರಿಗೆ ಮನೆ ನಿರ್ಮಾಣ, ಹಿರಿಯ ನಾಗರಿಕರಿಗೆ ಅಗತ್ಯ ಸೇವೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಸಂಘ ನಿರಂತರವಾಗಿ ನಡೆಸುತ್ತಿದೆ. ಜಾಗತಿಕ ವಿಮಾ ದಿನದ ಅಂಗವಾಗಿ ವಾಹನ ಮತ್ತು ಆರೋಗ್ಯ ವಿಮೆಗಳನ್ನು ವಿವಿಧ ವಿಮಾ ಕಂಪನಿಗಳ ಸಹಯೋಗದಲ್ಲಿ ಆಕರ್ಷಕ ಪ್ರೀಮಿಯಂನಲ್ಲಿ ಒದಗಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು. ಶಿಬಿರಕ್ಕೆ ಸಹಕರಿಸಿದ ಕಣಚೂರು ಮೆಡಿಕಲ್ ಕಾಲೇಜು, ಎ.ಜೆ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಹಾಗೂ ಸಹಯೋಗ ನೀಡಿದ ಎಲ್ಲ ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ ಟ್ರಸ್ಟ್, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ವಿಭಾಗ, ಬಂಡಿಕೊಟ್ಯ, ವಿದ್ಯಾರಣ್ಯ ಯುವಕ ವೃಂದ, ವಿದ್ಯಾರಣ್ಯ ಕಲಾವೃಂದ ಉಳ್ಳಾಲ, ಶಿವಶಕ್ತಿ ಯುವಕ ಮಂಡಲ ಹಾಗೂ ಉಳ್ಳಾಲ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟದ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ನೇಮಿರಾಜ್ ಪಿ., ಆನಂದ ಎಸ್. ಕೊಂಡಾಣ, ಗೋಪಾಲ್ ಎಂ., ಸೌಮ್ಯ ವಿಜಯ್, ವಾಮನ್ ಕೆ., ಡಾ. ಅನಿಷಾ, ಅಶೋಕ್ ಧರ್ಮನಗರ, ವಿಜಯ ಕುಮಾರ್, ದೇವಕಿ ಆರ್. ಉಳ್ಳಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ವೈದ್ಯಕೀಯ, ನೇತ್ರ ಹಾಗೂ ದಂತ ತಪಾಸಣೆ ನಡೆಸಲಾಯಿತು. ರತಿಕ ಸ್ವಾಗತಿಸಿ, ಪವಿತ್ರ ಯು.ಜೆ. ವಂದಿಸಿದರು. ಸಚಿನ್ ಕಾರ್ಯಕ್ರಮ ನಿರೂಪಿಸಿದರು.