ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಸಮೀಪ ಕಾಮಗಾರಿ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡೆಗೋಡೆ ಹಾಗೂ ಗುಡ್ಡ ಕುಸಿದ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುಡ್ಡದ ಮಣ್ಣು ಜರಿದು ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯ ಮೇಲೆ ಭಾರಿ ಒತ್ತಡ ಉಂಟಾಗಿ ಅದು ಕುಸಿದಿರುವುದು ತಿಳಿದುಬಂದಿದೆ. ಕುಸಿತದಿಂದ ಕಾಮಗಾರಿ ಪ್ರದೇಶದಲ್ಲಿ ಮಣ್ಣು ದೊಡ್ಡ ಪ್ರಮಾಣದಲ್ಲಿ ಜಾರಿದ್ದು, ತಡೆಗೋಡೆಯ ಕಾಂಕ್ರೀಟ್ ಭಾಗಗಳು ಧರೆಗುರುಳಿವೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾಮಗಾರಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕುಸಿತದಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕುಸಿತದ ನಿಖರ ಕಾರಣ ಹಾಗೂ ಹಾನಿಯ ಪ್ರಮಾಣವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.