ಮೂಡುಬಿದಿರೆ: ಜೀವನದಲ್ಲಿ ವೃತ್ತಿ ಹಾಗೂ ವೈಯಕ್ತಿಕ ಆಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಂಡು ನಿರಂತರ ಪ್ರಯತ್ನ ಮಾಡಿದಾಗ ಮಾತ್ರ ದೊಡ್ಡ ಸಾಧನೆ ಸಾಧ್ಯ ಎಂದು ಆಧ್ಯಾತ್ಮಿಕ ಕಂಟೆಂಟ್ ಕ್ರಿಯೇಟರ್, ‘ಟೆಂಪಲ್ ಗರ್ಲ್’ ಖ್ಯಾತಿಯ ನಮೃತಾ ಮೋಹನ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಬೆಳಂದಿಗಳ ಚಿಂತನಾ ಆವೃತ್ತಿಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.
ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರ ದೇವಾಲಯ ಪ್ರವೇಶ ಕುರಿತ ಪ್ರಶ್ನೆಗಳು ಗಮನ ಸೆಳೆದವು. ಇದಕ್ಕೆ ಪ್ರತಿಕ್ರಿಯಿಸಿದ ನಮೃತಾ ಮೋಹನ್, ದೇವಾಲಯಗಳ ಆಚರಣೆಗಳು ಆಯಾ ಕ್ಷೇತ್ರಗಳ ಸಂಪ್ರದಾಯ ಮತ್ತು ನಂಬಿಕೆಗಳ ಮೇಲೆ ಆಧಾರಿತವಾಗಿದ್ದು, ಅವುಗಳನ್ನು ಅನುಸರಿಸುವುದು ಅಥವಾ ಅನುಸರಿಸದಿರುವುದು ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದರು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರು ಅಲ್ಲಿನ ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಗೌರವಿಸುವುದು ಅಗತ್ಯ ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ವೃತ್ತಿ ಜೀವನದ ಆರಂಭದ ಹೋರಾಟವನ್ನು ವಿವರಿಸಿದ ಅವರು, 19ನೇ ಪ್ರಯತ್ನದಲ್ಲಿ ಜೆ.ಪಿ. ಮಾರ್ಗನ್ ಸಂಸ್ಥೆಯಲ್ಲಿ ಉದ್ಯೋಗ ದೊರೆತಿದ್ದು, ಬಳಿಕ ಸಿಟಿಬ್ಯಾಂಕ್ ಹಾಗೂ ವಾಲ್ಟ್ ಡಿಸ್ನಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕ್ ಆಳ್ವ ಮಾತನಾಡಿ, ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ವಿದ್ಯಾರ್ಥಿಗಳ ಸಂವಾದವು ಹೊಸ ಪ್ರೇರಣೆ ನೀಡುತ್ತದೆ. ತಮ್ಮ ಆಸಕ್ತಿಯನ್ನೇ ವೃತ್ತಿಯನ್ನಾಗಿ ರೂಪಿಸಿಕೊಂಡು ಯಶಸ್ಸು ಸಾಧಿಸಿರುವ ನಮೃತಾ ಮೋಹನ್ ಯುವಜನರಿಗೆ ಮಾದರಿಯಾಗಿದ್ದು, ಭಾರತೀಯ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿನಾದ್ಯಂತ ಪರಿಚಯಿಸುವ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಡಾ. ದೀಪಾ ಕೊಠಾರಿ, ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಮಧು ಕಾರ್ಯಕ್ರಮ ನಿರೂಪಿಸಿದರು. ನಿಯತಿ ಅಮೀನ್ ಅತಿಥಿಯನ್ನು ಪರಿಚಯಿಸಿದರು. ಲಿಖಿತಾ ವಂದಿಸಿದರು.