ಮೂಡುಬಿದಿರೆ: ಇಲ್ಲಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಮೂಡುಬಿದಿರೆಯ ಹಿರಿಯ ವಕೀಲ, ರೋಟರಿ ವಿದ್ಯಾ ಸಂಸ್ಥೆಯ ಕಾನೂನು ಸಲಹೆಗಾರ ಕೆ.ಆರ್. ಪಂಡಿತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಓದುವ ಮತ್ತು ತಿಳಿಯುವ ಹಂಬಲ ಇರಬೇಕು. ಶಿಸ್ತು ಹಾಗೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶಾಲಾ ಸಂಸತ್ತಿನ ಅವಶ್ಯಕತೆ, ನಿರ್ವಹಣೆ ಹಾಗೂ ಅದರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸಂಚಾಲಕ ಪ್ರವೀಣ್ ಚಂದ್ರ ಜೈನ್ ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ ಸದಸ್ಯರನ್ನು ಅಭಿನಂದಿಸಿದರು.

ಶಾಲಾ ಮುಖ್ಯ ಶಿಕ್ಷಕಿ ತಿಲಕಾ ಅನಂತವೀರ ಜೈನ್ ಪ್ರಸ್ತಾವಿಕವಾಗಿ ಮಾತನಾಡಿ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಸಭಾಧ್ಯಕ್ಷ ಅನಂತ ಕೃಷ್ಣರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದರ ಮಾದರಿಯಲ್ಲಿ ಶಾಲೆಯಲ್ಲಿಯೂ ಸಂಸತ್ತಿನ ಚಟುವಟಿಕೆಗಳನ್ನು ನಡೆಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು. ಶಾಲಾ ಸಂಸತ್ ಸದಸ್ಯರಾಗಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರೌಢಶಾಲಾ ನಾಯಕಿಯಾಗಿ ಆಯ್ಕೆಯಾದ ಜೆನಿಲಿಯಾ ಹಾಗೂ ಪ್ರಾಥಮಿಕ ಶಾಲಾ ನಾಯಕಿಯಾಗಿ ಆಯ್ಕೆಯಾದ ಪ್ರತ್ಯೂಷಾ ಸ್ವೀಕಾರ ಭಾಷಣ ಮಾಡಿದರು.

ಹಿರಿಯ ಸಂಯೋಜಕ ಗಜಾನನ ಮರಾಠೆ, ಆಡಳಿತಾಧಿಕಾರಿ ಪ್ರಫುಲ್ ಡಿಸೋಜ, ಎಲ್ಲಾ ವರ್ಗ ಸಂಯೋಜಕರು ಹಾಗೂ ಶಾಲಾ ಸಂಸತ್ತಿನ ಮೇಲ್ವಿಚಾರಕ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಂಜನಾ ವಿ. ಸ್ವಾಗತಿಸಿದರು. ರಿಶೋನಾ ವಂದಿಸಿದರು. ರಂಜನಾ ಮತ್ತು ನಂದನಾ ಕಾರ್ಯಕ್ರಮ ನಿರೂಪಿಸಿದರು.