ಮಂಗಳೂರು: ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹದ ಅಂಗವಾಗಿ ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯು ಉಳ್ಳಾಲದ ಸಮ್ಮರ್ ಸ್ಯಾಂಡ್ ಬೀಚ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ನಿಡ್ಡೋಡಿಯ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕ ಗಿರೀಶ್ ಜಿ. ಅವರು, ಗಾಳಿಪಟ ಹಾರಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸುವ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿದರು. ವಿದ್ಯುತ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಸಂಭವನೀಯ ಅಪಾಯಗಳನ್ನು ತಪ್ಪಿಸಬಹುದೆಂದು ಅವರು ತಿಳಿಸಿದರು.
ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಕೆ. ಎಂ. ಕಾಂತರಾಜು, ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಲೋಹಿತ್ ಬಿ. ಎಸ್. (ಅತ್ತಾವರ) ಹಾಗೂ ಜ್ಞಾನರತ್ನ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ದೇವಸ್ಯ ಉಪಸ್ಥಿತರಿದ್ದರು.
ಗಾಳಿಪಟ ಉತ್ಸವದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಣ್ಣಬಣ್ಣದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು.