ಮೂಡುಬಿದಿರೆ: ಮೂಡುಬಿದಿರೆ ಪ್ರೆಸ್ ಕ್ಲಬ್ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಮಾಧ್ಯಮ ಹಬ್ಬ’ ಕಾರ್ಯಕ್ರಮದಲ್ಲಿ ಟಿವಿ9 ಮಡಿಕೇರಿಯ ವೀಡಿಯೋ ಜರ್ನಲಿಸ್ಟ್ ಹಾಗೂ ಮೂಡುಬಿದಿರೆ ಬಿರಾವಿನ ನವೀನ್ ಸುವರ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸನ್ಮತ್ ಎಸ್. ಆಚಾರ್ಯ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಅಮೋಘ್ ಹೆಗ್ಡೆ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರೆಸ್ ಕ್ಲಬ್ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ. ಅಭಯಚಂದ್ರ ಉದ್ಘಾಟಿಸಿದರು.

ಮಂಗಳೂರಿನ ಫೊರೆನ್ಸಿಕ್ ಇನ್ವೆಸ್ಟಿಗೇಟರ್ ಶ್ರವಣ್ ಕುಮಾರ್ ಯು.ಕೆ. ಅವರು ‘ಎ.ಐ.ಯಿಂದ ಪತ್ರಕರ್ತರಿಗಿರುವ ಅವಕಾಶಗಳು ಮತ್ತು ಸವಾಲುಗಳು’ ವಿಷಯದ ಕುರಿತು ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ, ಅದರ ಸಾಧ್ಯತೆಗಳು ಹಾಗೂ ಎದುರಾಗಬಹುದಾದ ಸವಾಲುಗಳ ಕುರಿತು ಅವರು ವಿವರಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ರಾಜ್ಯ ಪತ್ರಕರ್ತರ ಸಂಘದ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಹಾಗೂ ಬಿಜೆಪಿ ಮುಖಂಡ ಸುದರ್ಶನ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ಪ್ರೆಸ್ ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಹರೀಶ್ ಕೆ. ಆದೂರು ವಂದಿಸಿದರು. ಕೋಶಾಧಿಕಾರಿ ಪ್ರಸನ್ನ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಕಾರ್ಯದರ್ಶಿ ಜೈಸನ್ ತಾಕೊಡೆ, ಸದಸ್ಯರಾದ ಯಶೋಧರ ಬಂಗೇರ, ರಾಘವೇಂದ್ರ ಶೆಟ್ಟಿ, ಶರತ್ ದೇವಾಡಿಗ, ಪುನೀತ್, ಪ್ರೆಸ್ ಕ್ಲಬ್ ನಿರ್ವಾಹಕ ಪ್ರಸನ್ನ ಸಚ್ಚರಿಪೇಟೆ ಹಾಗೂ ಇತರರು ಉಪಸ್ಥಿತರಿದ್ದರು.