ಮಂಗಳೂರು: ಇಲ್ಲಿನ ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಜುಲೈ 1ರಂದು ವೈದ್ಯರ ದಿನಾಚರಣೆ-2026 ಅಂಗವಾಗಿ "ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್?" ಎಂಬ ಆಶಯದೊಂದಿಗೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಅಶ್ವಿನಿ ದತ್ ಆರ್ ಮಾತನಾಡಿ, ಹಗಲು-ರಾತ್ರಿ ಎನ್ನದೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದ ಸೇವೆಯಲ್ಲಿ ನಿರತರಾಗಿರುವ ವೈದ್ಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕಿದೆ. ವೈದ್ಯರಿಗೆ ಗೌರವ ನೀಡುವುದಷ್ಟೇ ಅಲ್ಲ, ಸುರಕ್ಷಿತ ಮತ್ತು ಒತ್ತಡರಹಿತ ಕೆಲಸದ ವಾತಾವರಣ ಕಲ್ಪಿಸುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಮಾಜಕ್ಕೆ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸಿದ ಹಿರಿಯ ಹಾಗೂ ಅನುಭವೀ ವೈದ್ಯರನ್ನು ಪ್ರಸಾದ್ ನೇತ್ರಾಲಯ ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಸನ್ಮಾನಿತ ಎಲ್ಲ ವೈದ್ಯರಿಗೆ ಶುಭಾಶಯ ತಿಳಿಸಿದರು.
ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಎಚ್. ಪ್ರಭಾಕರ್ ಮಾತನಾಡಿ, ವೈದ್ಯರು, ಶುಶ್ರೂಷಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸಿದರು. ವೈದ್ಯರ ತ್ಯಾಗ ಮತ್ತು ಸೇವೆಗೆ ಇಡೀ ಸಮಾಜ ಸದಾ ಋಣಿಯಾಗಿದ್ದು, ಅವರ ಸೇವೆ ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು.
ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕುಡ್ಲು ಹಾಗೂ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಸಮಾಜಕ್ಕೆ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸಿದ ವಿವಿಧ ವೈದ್ಯಕೀಯ ಕ್ಷೇತ್ರಗಳ ವೈದ್ಯರಾದ ಡಾ. ಸುಧೀಂದ್ರ ರಾವ್ ಎಸ್, ಡಾ. ಕೃಷ್ಣ ಗೋಖಲೆ, ಡಾ. ಎ. ಮಂಜಯ್ಯ ಶೆಟ್ಟಿ, ಡಾ. ಶ್ರೀಪ್ರಕಾಶ್ ಬಿ, ಡಾ. ಕಿಶನ್ ರಾವ್, ಡಾ. ಆರ್.ಕೆ. ಶೆಟ್ಟಿ, ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ, ಡಾ. ಪ್ರಿಯದರ್ಶಿನಿ ರೈ, ಡಾ. ವಿಕ್ರಂ ಜೈನ್, ಡಾ. ಹರೀಶ್ ಶೆಟ್ಟಿ, ಡಾ. ಶರತ್ ಹೆಗಡೆ, ಡಾ. ಸಿಬಿನ, ಡಾ. ಶೃತಿ ಹಾಗೂ ಡಾ. ತೇಜಸ್ವಿನಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಪ್ರಸಾದ್ ನೇತ್ರಾಲಯ ಮಂಗಳೂರಿನ ನಿರ್ದೇಶಕರಾದ ಡಾ. ವಿಕ್ರಂ ಜೈನ್, ಡಾ. ಹರೀಶ್ ಶೆಟ್ಟಿ ಮತ್ತು ಡಾ. ಜೇಕಬ್ ಚಾಕೋ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ದಿವಾಕರ ಕಾರ್ಯಕ್ರಮ ನಿರೂಪಿಸಿದರು, ಕಾವ್ಯ ಸ್ವಾಗತಿಸಿದರು ಹಾಗೂ ನೂತನ್ ವಂದಿಸಿದರು. ನೂರಾರು ಗಣ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.