ಮೂಡುಬಿದಿರೆ: ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಹಕರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚಕರು ಹೊಸ ತಂತ್ರದ ಮೂಲಕ ಹಣ ವಂಚಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಸಂದೇಶ ಹರಿದಾಡುತಿದೆ.

ವಂಚಕರು ತಾವು ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಎಂದು ಪರಿಚಯಿಸಿಕೊಂಡು ಅಂಗಡಿಗಳಿಗೆ ಕರೆ ಮಾಡುತ್ತಾರೆ. ವಿವಿಧ ವಸ್ತುಗಳಿಗೆ ಆರ್ಡರ್ ನೀಡಿ, ಅವುಗಳನ್ನು ಆಸ್ಪತ್ರೆಗೆ ತಲುಪಿಸುವಂತೆ ಸೂಚಿಸುತ್ತಾರೆ. ಬಳಿಕ ಬಿಲ್ ಮೊತ್ತವನ್ನು ಗೂಗಲ್ ಪೇ ಮೂಲಕ ಪಾವತಿಸುವುದಾಗಿ ನಂಬಿಸುತ್ತಾರೆ.

ಸ್ವಲ್ಪ ಸಮಯದ ಬಳಿಕ ಬಿಲ್ ಮೊತ್ತಕ್ಕಿಂತ ಹೆಚ್ಚಿನ ಹಣ ಪಾವತಿಸಿರುವಂತೆ ತೋರಿಸುವ ನಕಲಿ ಸಂದೇಶವನ್ನು ವ್ಯಾಪಾರಿಗಳ ಮೊಬೈಲ್‌ಗೆ ಕಳುಹಿಸಲಾಗುತ್ತದೆ. ತಪ್ಪಾಗಿ ಹೆಚ್ಚುವರಿ ಮೊತ್ತ ಪಾವತಿಯಾಗಿದೆ ಎಂದು ಹೇಳಿ, ಆ ಹೆಚ್ಚುವರಿ ಹಣವನ್ನು ಮತ್ತೊಂದು ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಮರಳಿ ಕಳುಹಿಸುವಂತೆ ಒತ್ತಾಯಿಸುತ್ತಾರೆ.

ವಂಚಕರ ಮಾತನ್ನು ನಂಬಿ ಹಣ ವರ್ಗಾವಣೆ ಮಾಡಿದ ತಕ್ಷಣ ವ್ಯಾಪಾರಿಗಳಿಗೆ ಹಣ ನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಬ್ಯಾಂಕ್ ಖಾತೆಗೆ ಹಣ ನಿಜವಾಗಿ ಜಮೆಯಾಗಿದೆಯೇ ಎಂಬುದನ್ನು ಬ್ಯಾಂಕ್ ಅಥವಾ ಅಧಿಕೃತ ಪಾವತಿ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸದೆ ಯಾವುದೇ ಹಣವನ್ನು ಮರಳಿ ಕಳುಹಿಸಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಯಾವುದೇ ಅನುಮಾನಾಸ್ಪದ ಕರೆ, ನಕಲಿ ಪಾವತಿ ಸಂದೇಶ ಅಥವಾ ವಂಚನೆ ಪ್ರಯತ್ನ ಕಂಡುಬಂದರೆ ತಕ್ಷಣವೇ 112 ಸಹಾಯವಾಣಿ ಅಥವಾ ಸಂಬಂಧಪಟ್ಟ ಬ್ಯಾಂಕ್ ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.