ಮೂಡುಬಿದಿರೆ: ಆಳ್ವಾಸ್ ಪುನರ್ಜನ್ಮ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಮಹಿಳಾ ಮಧ್ಯವರ್ಜನ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರಿನ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ಸಂಸ್ಥಾಪಕಿ ಡಾ. ಹಿಲ್ಡಾ ರಾಯಪ್ಪನ್, ಮದ್ಯವ್ಯಸನವು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ವ್ಯಸನಿಗಳನ್ನು ಕಳಂಕದ ಪ್ರತೀಕವಾಗಿ ಕಾಣದೆ ಆತ್ಮವಿಶ್ವಾಸ ತುಂಬಿ ಹೊಸ ಬದುಕಿನತ್ತ ಕರೆದೊಯ್ಯುವುದು ಸಮಾಜದ ಜವಾಬ್ದಾರಿ ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಕುಟುಂಬದ ಸಮಸ್ಯೆಗಳು, ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ, ಸಾಮಾಜಿಕ ಕಾರಣಗಳಿಂದ ಮಹಿಳೆಯರಲ್ಲಿ ಮದ್ಯವ್ಯಸನ ಹೆಚ್ಚುತ್ತಿದ್ದು, ಅವರನ್ನು ಮುಖ್ಯವಾಹಿನಿಗೆ ಮರಳಿ ತರುವ ಇಂತಹ ಪುನರ್ವಸತಿ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರ ಸಮಾಜಮುಖಿ ಚಿಂತನೆಯನ್ನು ಅಭಿನಂದಿಸಿದರು.

ಜನಜಾಗೃತಿ ಪ್ರಾದೇಶಿಕ ಕಚೇರಿ, ಬೆಳ್ತಂಗಡಿಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಮಾತನಾಡಿ, ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ ಶಿಬಿರದ ವ್ಯವಸ್ಥೆ ಮಾಡಲಾಗಿದ್ದು, ಇದರ ಮೂಲಕ ವ್ಯಸನಿಗಳ ಬದುಕಿನಲ್ಲಿ ಪರಿವರ್ತನೆ ಉಂಟಾಗಿ ಕುಟುಂಬಗಳಲ್ಲಿ ಸುಖ, ಶಾಂತಿ, ಆಶಾಭಾವನೆ ಮರುಸ್ಥಾಪನೆಯಾಗಲಿ ಎಂದು ಆಶಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ. ವಿನಯ್ ಆಳ್ವ, ಉದ್ಯಮಿ ಕೆ. ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಮೂಡುಬಿದಿರೆ ಜನಜಾಗೃತಿ ವೇದಿಕೆಯ ಅಧ್ಯಕ್ಷ ವಾಸುದೇವ್ ನಾಯ್ಕ ಉಪಸ್ಥಿತರಿದ್ದರು.

ಎಸ್‌ಕೆಆರ್‌ಡಿಪಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಸ್ವಾಗತಿಸಿದರು. ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕಿ ಸುಮನಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಪುನರ್ಜನ್ಮದ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್ ವಂದಿಸಿದರು.