ಉಪ್ಪಿನಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ , ಮಂಗಳೂರು, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಯೂನಿಯನ್ , ಮಂಗಳೂರು ಆಶ್ರಯದಲ್ಲಿ, ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ “ವಿಶೇಷ ಸಹಕಾರ ಸಪ್ತಾಹ” ಅಂಗವಾಗಿ “ಸಾಮಾಜಿಕ ಕಳಕಳಿ - ಸಹಕಾರ ಆರೋಗ್ಯ” ಧ್ಯೇಯದೊಂದಿಗೆ 112ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರವನ್ನು ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಉಪ್ಪಿನಂಗಡಿಯ ಯೂನಿಯನ್ ಬ್ಯಾಂಕ್ ಸಮೀಪದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.
ವಿಶೇಷ ಸಹಕಾರ ಸಪ್ತಾಹ ಅಂಗವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಮೂರ್ತೆದಾರರ ಸೇವಾ ಸಹಕಾರಿ ಸಂಘ ಉಪ್ಪಿನಂಗಡಿ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ ಗೌರವ ಉಪಸ್ಥಿತರಿರುವರು.
ಶಿಬಿರದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್, ಮಂಗಳೂರು ತಜ್ಞ ವೈದ್ಯರ ತಂಡದಿಂದ ಕಣ್ಣಿನ ತಪಾಸಣೆ, ಅಗತ್ಯವಿರುವವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಮಧುಮೇಹ, ರಕ್ತದೊತ್ತಡ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು, ಗಂಟಲು ತಪಾಸಣೆ, ಹಲ್ಲು ಕೀಳುವುದು, ಹುಳುಕು ಹಲ್ಲು ಭರ್ತಿ, ಹಲ್ಲು ಸ್ವಚ್ಛಗೊಳಿಸುವುದು, ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡ್ ವಿತರಣೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳು ಲಭ್ಯವಿರಲಿವೆ. ಅಗತ್ಯವಿರುವವರಿಗೆ ಉಚಿತ ಕನ್ನಡಕ ವಿತರಿಸಲಾಗುವುದು.
ಯುವವಾಹಿನಿ ಉಪ್ಪಿನಂಗಡಿ ಘಟಕ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ರೋಟರಿ ಕ್ಲಬ್ ಉಪ್ಪಿನಂಗಡಿ, ಜೆಸಿಐ ಉಪ್ಪಿನಂಗಡಿ ಸಹಯೋಗದಲ್ಲಿ ಶಿಬಿರ ನಡೆಯಲಿದ್ದು, ಸಂಘದ ಸದಸ್ಯರು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೌಮ್ಯ ವಿಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.