ಮೂಡುಬಿದಿರೆ: ಕರಾವಳಿ ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯವನ್ನು ಮೂಲ ಹಂತದಲ್ಲೇ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ರಾಷ್ಟ್ರೀಯ ಮಟ್ಟದ ‘ಹಸಿರು ಸಂವಾದ’ ಅಭಿಯಾನಕ್ಕೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಚಾಲನೆ ದೊರೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪರ್ಯಾವರಣ ಸಂರಕ್ಷಣಾ ತಂಡ ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ಕೈಗಾರಿಕೆಗಳು ಮತ್ತು ಆಡಳಿತ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿಸಿರುವ ಈ ಅಭಿಯಾನವು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಪರಿಸರ ಸಂರಕ್ಷಣೆಗೆ ಮಾದರಿಯಾಗುವ ಗುರಿ ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯ್ಕೋಡ್ ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಪರಸ್ಪರ ಸಂಬಂಧ ಹೊಂದಿದ್ದು, ಸರ್ಕಾರಿ ಯೋಜನೆಗಳು ಫಲಪ್ರದವಾಗಬೇಕಾದರೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಹೇಳಿದರು. ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಪರಿಸರ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತಿದ್ದು, ಪರಿಸರ ಸ್ನೇಹಿ ಜೀವನಶೈಲಿ ಮತ್ತು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.
ಮಹಿಳೆಯರಲ್ಲಿ ಹೆಚ್ಚುತ್ತಿರುವ ಕೆಲವು ಆರೋಗ್ಯ ಸಮಸ್ಯೆಗಳಿಗೆ ಒಂದು ಬಾರಿ ಬಳಸಿ ತ್ಯಜಿಸುವ ಸ್ಯಾನಿಟರಿ ಹಾಗೂ ಅಡಲ್ಟ್ ಪ್ಯಾಡ್‌ಗಳಲ್ಲಿ ಬಳಸುವ ಕೆಲವು ರಾಸಾಯನಿಕಗಳ ಪರಿಣಾಮವೂ ಕಾರಣವಾಗಿರಬಹುದೆಂಬ ಆತಂಕಗಳಿದ್ದು, ಸುರಕ್ಷಿತ ಬಳಕೆ ಮತ್ತು ವಿಲೇವಾರಿ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಪರಿಸರ ಸಂರಕ್ಷಣೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸೇವೆಯನ್ನು ಶ್ಲಾಘಿಸಿದರು.
ಪರ್ಯಾವರಣ ಸಂರಕ್ಷಣಾ ತಂಡದ ಪ್ರಾಂತ ಸಂಯೋಜಕ ವೆಂಕಟೇಶ್ ಸಂಗನಾಳ್ ಮಾತನಾಡಿ, ಪರಿಸರ ಸಂರಕ್ಷಣೆ ಕೇವಲ ಸ್ವಚ್ಛತಾ ಅಭಿಯಾನವಾಗದೆ, ಜನರ ಜೀವನಶೈಲಿಯಲ್ಲಿ ಬದಲಾವಣೆ ತರುವ ಸಾಮಾಜಿಕ ಚಳವಳಿಯಾಗಬೇಕು ಎಂದರು. ಬಳಕೆ ಆಧಾರಿತ ಜೀವನಶೈಲಿಯಿಂದ ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ಲಾಸ್ಟಿಕ್ ಮತ್ತು ಘನ ತ್ಯಾಜ್ಯದ ಸಮಸ್ಯೆ ಗಂಭೀರವಾಗುತ್ತಿದ್ದು, ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಗ್ರಾಮ ಮಟ್ಟದಲ್ಲೇ ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಮಾದರಿ ರೂಪಿಸುವ ಗುರಿಯನ್ನು ಅಭಿಯಾನ ಹೊಂದಿದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಅರಬ್ಬಿ ಸಮುದ್ರ ಮತ್ತು ಪಶ್ಚಿಮ ಘಟ್ಟಗಳಿಂದ ಆವೃತವಾಗಿರುವ ಕರಾವಳಿ ಕರ್ನಾಟಕದ ಅಮೂಲ್ಯ ಪರಿಸರ ವ್ಯವಸ್ಥೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು. ಪರಿಸರ ಸಂರಕ್ಷಣೆಯನ್ನು ಅಭಿವೃದ್ಧಿಗೆ ವಿರುದ್ಧವಾಗಿ ನೋಡದೆ, ಸುಸ್ಥಿರ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿ ಪರಿಗಣಿಸಬೇಕೆಂದು ಹೇಳಿದರು.
ಮೂರು ಹಂತದ ಕಾರ್ಯಯೋಜನೆ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಅಭಿಯಾನದ ಕುರಿತು ಮಾಹಿತಿ ನೀಡಿ, ಪಾವಂಜೆ (ಗುರುಪುರ), ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 46 ಗ್ರಾಮಗಳಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದರು. ಜುಲೈ–ಆಗಸ್ಟ್ ಅವಧಿಯಲ್ಲಿ ಸಮೀಕ್ಷೆ, ಮಾಹಿತಿ ಸಂಗ್ರಹ, ತ್ಯಾಜ್ಯ ಸಮಸ್ಯೆಗಳ ಮೌಲ್ಯಮಾಪನ ಹಾಗೂ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಚೋಟಾ ಕಾಪ್’ ಯೋಜನೆ ಹಾಗೂ ಯುವಜನರಿಗೆ ಪರಿಸರ ಸ್ನೇಹಿ ಆವಿಷ್ಕಾರಗಳನ್ನು ಉತ್ತೇಜಿಸುವ ಐಡಿಯಾಥಾನ್ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಆಗಸ್ಟ್‌ನಿಂದ ನವೆಂಬರ್‌ವರೆಗೆ ಘನ ತ್ಯಾಜ್ಯ ನಿರ್ವಹಣಾ ನಿಯಮಾವಳಿ–2026ರ ಅನ್ವಯ ನದಿಗಳಲ್ಲಿನ ತ್ಯಾಜ್ಯ ತೆರವು, ಮರುಬಳಕೆ ವ್ಯವಸ್ಥೆ, ಸ್ವಚ್ಛ ಗ್ರಾಮ ಸ್ಪರ್ಧೆ, ಪರಿಸರ ಜಾಗೃತಿ ರೀಲ್ಸ್ ಸ್ಪರ್ಧೆ, ಫನ್ನಿ ರಿಪೋರ್ಟರ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿ, ಉತ್ತಮ ಸಾಧನೆ ಮಾಡಿದ ಗ್ರಾಮಕ್ಕೆ ‘ಸ್ವಚ್ಛ ಗ್ರಾಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಉತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರಿಸರ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸಿದ ‘ವೇಸ್ಟ್ ವಾರಿಯರ್ಸ್’, ವಿದ್ಯಾರ್ಥಿಗಳು ಹಾಗೂ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕರಾವಳಿಯಲ್ಲಿ ಸಮುದಾಯ, ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಆಡಳಿತ ಹಾಗೂ ಪರಿಸರ ತಜ್ಞರನ್ನು ಒಂದೇ ವೇದಿಕೆಗೆ ತರುವ ಈ ಅಭಿಯಾನವು ವೈಜ್ಞಾನಿಕ ಮತ್ತು ಶಾಶ್ವತ ತ್ಯಾಜ್ಯ ನಿರ್ವಹಣೆಗೆ ಹೊಸ ಮಾದರಿಯಾಗುವ ನಿರೀಕ್ಷೆ ವ್ಯಕ್ತವಾಯಿತು.
ಪರ್ಯಾವರಣ ಸಂರಕ್ಷಣಾ ತಂಡದ ಜಯರಾಮ್ ಬೊಳ್ಳಾಜೆ, ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್. ಪ್ರಕಾಶ್, ಪರಿಸರ ವಿಜ್ಞಾನಿ ಡಾ. ಬಿನಿಷಾ ಪಿ., ಘನ ತ್ಯಾಜ್ಯ ನಿರ್ವಹಣಾ ತಜ್ಞ ಹಾಗೂ ‘ಫ್ರೆಂಡ್ಸ್ ಆಫ್ ಲೇಕ್ಸ್’ ಸಂಸ್ಥೆಯ ಸಂಸ್ಥಾಪಕ ರಾಮಪ್ರಸಾದ್, ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಅರ್ಜುನ ಕುಮಾರ್ ಉಪಸ್ಥಿತರಿದ್ದರು. ಹಸಿರು ಸಂವಾದ ಅಭಿಯಾನದ ಮಂಜುನಾಥ್ ಸ್ವಾಗತಿಸಿದರು. ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.