ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆ, ಏಕಾಗ್ರತೆ, ಸ್ಮರಣಶಕ್ತಿ, ಆತ್ಮವಿಶ್ವಾಸವನ್ನು ವೃದ್ಧಿಸುವ ಉದ್ದೇಶದಿಂದ ಮೂಡುಬಿದಿರೆಯ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಖ್ಯಾತ ತರಬೇತುದಾರ ಡಾ. ಸರ್ಫರಾಜ್ ಜೆ. ಹಾಸಿಮ್ ಅವರಿಂದ 'ಮೈಂಡ್ ಮ್ಯಾಪಿಂಗ್' ಕುರಿತ ವಿಶೇಷ ತರಬೇತಿ ಕಾರ್ಯಕ್ರಮ ನಡೆಯಿತು.
ಡಾ. ಸರ್ಫರಾಜ್ ಜೆ. ಹಾಸಿಮ್ ಮಾತನಾಡಿ, ವಿದ್ಯಾರ್ಥಿಗಳ ಯೋಚನಾ ವಿಧಾನವನ್ನು ವ್ಯವಸ್ಥಿತಗೊಳಿಸುವ ಕಲೆ, ಕಲಿಕೆಯ ಪರಿಣಾಮಕಾರಿ ಕಾರ್ಯತಂತ್ರಗಳು, ಸ್ಮರಣಶಕ್ತಿಯನ್ನು ವೃದ್ಧಿಸುವ ವೈಜ್ಞಾನಿಕ ವಿಧಾನಗಳು, ಸೃಜನಶೀಲ ಚಿಂತನೆಯ ಬೆಳವಣಿಗೆ, ತಮ್ಮನ್ನು ತಾವು ಅರಿತುಕೊಳ್ಳುವ ಆತ್ಮಾವಲೋಕನದ ಮಹತ್ವ ಕುರಿತು ಸಂವಾದಾತ್ಮಕವಾಗಿ ವಿವರಿಸಿದರು.
ವಿವಿಧ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ವಿಷಯವನ್ನು ನಿರೂಪಿಸಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೊಳಗಿನ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಗುರಿಮುಖಿಯಾಗಿ ರೂಪಿಸಿಕೊಳ್ಳುವ ಕೌಶಲ್ಯವೇ ಯಶಸ್ಸಿನ ಮೂಲಮಂತ್ರ ಎಂದು ತಿಳಿಸಿದರು. ತರಬೇತಿಯುದ್ದಕ್ಕೂ ವಿದ್ಯಾರ್ಥಿಗಳು ಉತ್ಸಾಹದಿಂದ ವಿವಿಧ ಚಿಂತನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಶಿಕ್ಷಣವು ಕೇವಲ ಪರೀಕ್ಷಾ ಫಲಿತಾಂಶಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಚಿಂತನಾ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ಕೌಶಲ್ಯ, ವ್ಯಕ್ತಿತ್ವ ವಿಕಾಸವನ್ನು ಬೆಳೆಸುವತ್ತ ಸಾಗಬೇಕು. ಮೈಂಡ್ ಮ್ಯಾಪಿಂಗ್‌ನಂತಹ ತರಬೇತಿಗಳು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಜಾಗೃತಗೊಳಿಸಿ ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಸಂಪನ್ಮೂಲ ವ್ಯಕ್ತಿಗಳನ್ನು ಗಿಡ ನೀಡಿ ಗೌರವಿಸಿದರು. ಪ್ರಾಂಶುಪಾಲ ಪುಷ್ಪರಾಜ್ ಸ್ವಾಗತಿಸಿದರು. ಉಪಪ್ರಾಂಶುಪಾಲ ತೇಜಸ್ವಿ ಭಟ್, ಸುನಾದ್ ರಾಜ್ ಜೈನ್ ಉಪಸ್ಥಿತರಿದ್ದರು. ಉಪನ್ಯಾಸಕಿ ವಿಲ್ಮಾ ನಿರೂಪಿಸಿದರು.