ಮೂಡುಬಿದಿರೆ: ಇಲ್ಲಿನ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕರಾದ ಡಾ. ರಾಮಕೃಷ್ಣ ಶಿರೂರು ಅವರು ನಾಡೋಜ ಡಾ. ಕೈಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

ಜುಲೈ 26ರಂದು ಕಾಸರಗೋಡು ಕನ್ನಡ ಭವನದ ರಜತೋತ್ಸವದ ಅಂಗವಾಗಿ ನಡೆಯುವ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಳೆದ ಮೂರು ದಶಕಗಳಿಂದ ಹೋಲಿ ರೋಸರಿ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಮಕೃಷ್ಣ ಶಿರೂರು ಅವರು ಸಾಹಿತ್ಯ ಸೌರಭ ಹಾಗೂ ಸಿರಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ಸೌರಭ, ಯಕ್ಷ ಸೌರಭ ಹಾಗೂ ಗಾನ ಸೌರಭ ತರಬೇತಿಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿಯಾಗಿ 30 ವರ್ಷಗಳಿಂದ ಸೇವೆ ಸಲ್ಲಿಸಿರುವ ಅವರ ಶಿಕ್ಷಣ, ಶಿಕ್ಷಕರ ಸಂಘಟನೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಲಭಿಸಲಿ ಎಂದು ಕರ್ನಾಟಕ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಪಿ.ಎಂ. ವೆಂಕಟರಮಣ ಹೊಳ್ಳ ಅಭಿನಂದಿಸಿದ್ದಾರೆ.