ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳು ಕೇವಲ ಜ್ಞಾನ ನೀಡುವ ಕೇಂದ್ರಗಳಾಗಿರದೆ, ಸಮಾಜಕ್ಕೆ ಉತ್ತಮ ಮೌಲ್ಯಗಳನ್ನು ಪರಿಚಯಿಸುವ ತಾಣಗಳಾಗಬೇಕು ಎಂಬ ಸಂದೇಶವನ್ನು ಎಸ್.ಎನ್.ಎಂ. ಪಾಲಿಟೆಕ್ನಿಕ್ ತನ್ನ ಶೂನ್ಯ ತ್ಯಾಜ್ಯ ಪರಿಕಲ್ಪನೆಯ ಮೂಲಕ ಕಾರ್ಯರೂಪಕ್ಕೆ ತಂದಿದೆ. 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದಿಂದ ಹಿಡಿದು ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದವರೆಗೆ ಸಂಪೂರ್ಣ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಕಾಲೇಜು ಗಮನ ಸೆಳೆದಿದೆ.

ಜುಲೈ 2ರಂದು ನಡೆದ ವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಅತಿಥಿಗಳು ಸೇರಿ ಸುಮಾರು 700 ಮಂದಿಗೆ ಎಲೆಯಲ್ಲಿ ಉಪಹಾರ ಹಾಗೂ ಸ್ಟೀಲ್ ಗ್ಲಾಸ್‌ಗಳಲ್ಲಿ ಮಾಲ್ಟ್ ವಿತರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಯಾವುದೇ ಅಲಂಕಾರಿಕ ವಸ್ತುಗಳನ್ನು ಬಳಸದೆ, ಏಕಬಳಕೆಯ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಉಂಟುಮಾಡುವ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲಾಯಿತು. ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ತ್ಯಾಜ್ಯ ಕಡಿತಕ್ಕೆ ಆದ್ಯತೆ ನೀಡಲಾಯಿತು.

ಇದೇ ಪರಿಕಲ್ಪನೆಯನ್ನು ಮುಂದುವರಿಸಿ ಜುಲೈ 4ರಂದು ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿಯ 50 ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಯಿತು. ಎಲೆಯಲ್ಲಿ ಉಪಹಾರ ನೀಡುವುದರೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಗಿಡವನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿ ಜೀವನದ ಆರಂಭದಲ್ಲೇ ಮನದಟ್ಟು ಮಾಡುವ ಉದ್ದೇಶ ಈ ಕಾರ್ಯಕ್ರಮದ ಹಿಂದಿತ್ತು.

ಈ ಸಂದರ್ಭದಲ್ಲಿ ಬಿಮಲ್ ಬಿಲ್ಡ್‌ಕಾನ್ ಸಂಸ್ಥೆಯ ಸಹ ನಿರ್ದೇಶಕ ಹಾಗೂ ಎಸ್.ಎನ್.ಎಂ. ಪಾಲಿಟೆಕ್ನಿಕ್‌ನ ಹಳೆ ವಿದ್ಯಾರ್ಥಿ ಪ್ರಶಾಂತ್ ಮಾತನಾಡಿ, ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳಿದ್ದು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪ್ರಾಯೋಗಿಕ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು. ವಿಭಾಗದ ಮುಖ್ಯಸ್ಥ ಗೋಪಾಲಕೃಷ್ಣ ಕೆ.ಎಸ್. ಹಾಗೂ ಉಪನ್ಯಾಸಕರು ವಿಭಾಗದ ಪರಿಚಯ, ಪಠ್ಯಕ್ರಮ, ಪ್ರಯೋಗಾಲಯಗಳ ಸೌಲಭ್ಯ, ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಳೆ ವಿದ್ಯಾರ್ಥಿಗಳಾದ ಕ್ಯಾರಲ್ ವಿವಿನ್ ಮಾಡ್ತ ಹಾಗೂ ಜಿತೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡು ಹೊಸ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಶೂನ್ಯ ತ್ಯಾಜ್ಯ ನಿರ್ವಹಣೆ ಎನ್ನುವುದು ಕೇವಲ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದಷ್ಟೇ ಅಲ್ಲ, ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನಶೈಲಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಚಳವಳಿಯಾಗಿದೆ. ಈ ನಿಟ್ಟಿನಲ್ಲಿ ಎಸ್.ಎನ್.ಎಂ. ಪಾಲಿಟೆಕ್ನಿಕ್ ಅನುಸರಿಸಿದ ಪರಿಸರ ಸ್ನೇಹಿ ಮಾದರಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಅತಿಥಿಗಳಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಣದೊಂದಿಗೆ ಪರಿಸರ ಜಾಗೃತಿಯನ್ನೂ ಬೆಳೆಸುವ ಇಂತಹ ಪ್ರಯತ್ನಗಳು ಇತರ ಶಿಕ್ಷಣ ಸಂಸ್ಥೆಗಳಿಗೂ ಮಾದರಿಯಾಗಿವೆ.