ಮೂಡುಬಿದಿರೆ: ವಾರದ ಸಂತೆ, ಅನಿಯಂತ್ರಿತ ಪಾರ್ಕಿಂಗ್, ರಸ್ತೆ ಬದಿಯ ವ್ಯಾಪಾರ, ಖಾಸಗಿ ಬಸ್‌ಗಳ ಅಸಮರ್ಪಕ ನಿಲುಗಡೆಯಿಂದ ಮೂಡುಬಿದಿರೆ ಪೇಟೆಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಗಂಭೀರವಾಗುತ್ತಿದ್ದು, ಶಾಶ್ವತ ಪರಿಹಾರ ಕಲ್ಪಿಸಿ ಘನ ವಾಹನಗಳಿಗೆ ಪರ್ಯಾಯ ಮಾರ್ಗ ರೂಪಿಸುವಂತೆ ನಾಗರಿಕರು ಸಂಬಂಧಿತ ಇಲಾಖೆಗೆ ಆಗ್ರಹಿಸಿದರು.
ಸೋಮವಾರ ಸಾಯಂಕಾಲ ಸಮಾಜ ಮಂದಿರದಲ್ಲಿ ನಡೆದ ನಾಗರಿಕರ ಸಭೆಯಲ್ಲಿ ಪೇಟೆಯ ಸಂಚಾರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ವಾರದ ಸಂತೆಯ ದಿನ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಯುವುದರಿಂದ ಗ್ರಾಹಕರು ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಖರೀದಿಗೆ ಮುಂದಾಗುತ್ತಾರೆ. ಇದರಿಂದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಬಸ್‌ಗಳು ನಿಲ್ದಾಣ ಪ್ರವೇಶಿಸಲು ಸಾಧ್ಯವಾಗದೆ ಕೆಳರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಕರ್ಕಳ ಕಡೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ರಾಜೇಂದ್ರ ಪೈ ಹೇಳಿದರು.
ಖಾಸಗಿ ಬಸ್ ನಿಲ್ದಾಣದ ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ದ್ವಿಚಕ್ರ ವಾಹನ, ಕಾರು, ಆಟೋಗಳನ್ನು ದಿನವಿಡೀ ನಿಲ್ಲಿಸುವುದರಿಂದ ಬಸ್ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರದೀಪ್ ಹೇಳಿದರು. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಯಾವುದೇ ವಾಹನಗಳಿಗೆ ಪಾರ್ಕಿಂಗ್ ಅವಕಾಶ ನೀಡಬಾರದು. ಅಂಗಡಿ ಮಾಲೀಕರು, ಸಿಬ್ಬಂದಿ ಹಿಂಭಾಗದಲ್ಲಿರುವ ಪಾರ್ಕಿಂಗ್ ಸ್ಥಳ ಬಳಸಿಕೊಳ್ಳಬೇಕು ಎಂದು ಯಶೋಧರ ಸಲಹೆ ನೀಡಿದರು.
ಮುಖ್ಯ ರಸ್ತೆಯಲ್ಲಿ ಘನ ವಾಹನಗಳ ಸಂಚಾರದಿಂದ ಟ್ರಾಫಿಕ್ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂತಹ ವಾಹನಗಳನ್ನು ವಿದ್ಯಾಗಿರಿಯಿಂದ ಮಾಸ್ತಿಕಟ್ಟೆ ಬೈಪಾಸ್ ರಸ್ತೆಯ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಬಸ್ ಮಾಲೀಕ ಶಶಿ ಆಮೀನ್ ಸಲಹೆ ನೀಡಿದರು.
ಬಸ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಬಸ್ ಮಾಲೀಕರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೆನರಾ ಬಸ್ ಮಾಲೀಕರ ಸಂಘದ ಮೂಡುಬಿದಿರೆ ಅಧ್ಯಕ್ಷ ನಾರಾಯಣ ಪಿ.ಎಂ. ಭರವಸೆ ನೀಡಿದರು.
ಶಾಸಕರು , ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಪೊಲೀಸ್ ನಿರೀಕ್ಷಕರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಅಮರ್ ಕೋಟೆ, ಮನೋಜ್ ಮಲ್, ಸುರೇಂದ್ರ, ಕೌಸ್ತುಭ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಏಜೆಂಟರಾದ ಸಂತೋಷ್ ಶೆಟ್ಟಿ, ಸತೀಶ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.