ಮೂಡುಬಿದಿರೆ: ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆಗೆ ಚಾಲನೆ ನೀಡಲಾಯಿತು.

ಕಾಲೇಜಿನ ಸ್ಥಾಪಕ ಅಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಚಿತವಾಗಿ ಬಿಸಿ ಊಟ ನೀಡುವುದು ಅವರ ಆರೋಗ್ಯ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

ವಿದ್ಯಾರ್ಥಿ ಸಂಘವನ್ನು ವೃಂದಾ ರಾಜೇಂದ್ರ ಚೌಟ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸುಮಂತ್, ಕಾರ್ಯದರ್ಶಿಯಾಗಿ ದೀಪ್ತಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಭುವನೇಶ್ವರಿ ಆಯ್ಕೆಯಾದರು.

ಶ್ವೇತಾ ಜೈನ್, ವೀಣಾ ರಘುಚಂದ್ರ, ಮಂಜುಳಾ ಅಭಯಚಂದ್ರ ಜೈನ್,, ಪುರಸಭೆಯ ಪರಿಸರ ಅಭಿಯಂತರ ಶಿಲ್ಪಾ, ಸಂಜಯಂತ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದರು. ಬ್ಯಾನರ್ ಬಳಸದೆ ಕಪ್ಪು ಫಲಕದಲ್ಲಿ ಕಾರ್ಯಕ್ರಮದ ವಿವರ ದಾಖಲಿಸಲಾಗಿತ್ತು. ಅತಿಥಿಗಳನ್ನು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಮೂಲಕ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು. ಶಾಲೆಯ ಶಿಕ್ಷಕರಿಗೆ ಸಮವಸ್ತ್ರ ಸೀರೆಗಳನ್ನು ಅತಿಥಿಗಳ ಮೂಲಕ ವಿತರಿಸಲಾಯಿತು.

ಪುರಸಭೆಯ ಪರಿಸರ ಅಭಿಯಂತರರನ್ನು ಸ್ವಾಮೀಜಿಯವರ ನಿರ್ದೇಶನದಂತೆ ಸ್ವಚ್ಛ, ಸ್ವಸ್ಥ ಹಾಗೂ ಪ್ಲಾಸ್ಟಿಕ್ ಮುಕ್ತ ಮೂಡುಬಿದಿರೆ ನಿರ್ಮಾಣಕ್ಕೆ ನೀಡಿದ ಸಹಕಾರಕ್ಕಾಗಿ ವೃಂದಾ ರಾಜೇಂದ್ರ ಚೌಟ ಅವರ ಮೂಲಕ ಗೌರವಿಸಲಾಯಿತು. ಎಲ್ಲ ಅತಿಥಿಗಳನ್ನು ಪರಸ್ಪರ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಶುಭ ಸಮಾರಂಭಗಳನ್ನು ಆಚರಿಸುವ ಸಂದರ್ಭದಲ್ಲಿ ಕಾಲೇಜಿನ ಬಿಸಿಯೂಟ ಯೋಜನೆಗೆ ಕೊಡುಗೆ ನೀಡುವ ಮೂಲಕ ಆಚರಿಸಬಹುದು ಎಂದು ಪ್ರಾಂಶುಪಾಲೆ ಸೌಮ್ಯಶ್ರೀ ಪ್ರಸ್ತಾಪಿಸಿದರು.

ಪರಿಸರ ಅಭಿಯಂತರರು ಹಾಗೂ ಸಂಜಯಂತ್ ಕುಮಾರ್ ಶೆಟ್ಟಿ ದೇಣಿಗೆಯನ್ನು ಬಿಸಿಯೂಟ ಯೋಜನೆಗೆ ಕೊಡುಗೆಯಾಗಿ ನೀಡಿದರು. ಬಳಿಕ ಅತಿಥಿಗಳು ವಿದ್ಯಾರ್ಥಿಗಳಿಗೆ ಬಿಸಿಯೂಟ, ಪಾಯಸ, ಲಡ್ಡು ಹಾಗೂ ಬರ್ಫಿ ಬಡಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಪವನ ಶ್ರೀ ವಂದಿಸಿದರು. ಕಾಲೇಜಿನ ಉಪನ್ಯಾಸಕರು, ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಹಾಗೂ ಶಿಕ್ಷಕ-ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.