ಮೂಡುಬಿದಿರೆ: ಇಲ್ಲಿನ ಮಹಾವೀರ ಕಾಲೇಜು–ಕೀರ್ತಿ ನಗರ ವೃತ್ತದ ಸಮೀಪ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಅಪಾಯಕಾರಿ ಗುಂಡಿಗಳನ್ನು ಮಾಜಿ ಪುರಸಭೆ ಸದಸ್ಯೆ ಡಯಾನಾ ಸೆರಾವೊ ನೇತೃತ್ವದಲ್ಲಿ ಮುಚ್ಚಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಭಾಗದ ರಸ್ತೆಯಲ್ಲಿದ್ದ ದೈತ್ಯ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ನಿರಂತರವಾಗಿ ಅಪಘಾತಕ್ಕೀಡಾಗುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಯಾನಾ ಸೆರಾವೊ ಅವರು ಸ್ವಯಂಪ್ರೇರಿತರಾಗಿ ಮುಂದಾಗಿ, ಸ್ಥಳೀಯರ ಸಹಕಾರದೊಂದಿಗೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾದರಿ ನಾಗರಿಕ ಸೇವೆ ಮೆರೆದಿದ್ದಾರೆ.
ಸ್ಥಳೀಯರ ಸಾಥ್ – ಸಕಾಲದಲ್ಲಿ ನೆರವಾದ ಉದ್ಯಮಿ: ಡಯಾನಾ ಅವರ ಈ ಸಾಮಾಜಿಕ ಕಾರ್ಯಕ್ಕೆ ಅಲಂಗಾರು ಲಯನ್ಸ್ ಕ್ಲಬ್ ಸದಸ್ಯ ವಲೆರಿಯನ್ ಪಿಂಟೋ ಹಾಗೂ ಸ್ಥಳೀಯರಾದ ಅಕ್ಷಯ್ ಕೈಜೋಡಿಸಿದರು. ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದಾಗ ನಿರ್ಮಾಣ ಸಾಮಗ್ರಿಗಳ ಕೊರತೆ ಎದುರಾಯಿತು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ‘ರುದ್ರಾಂಶ ಕನ್‌ಸ್ಟ್ರಕ್ಷನ್’ ಸಂಸ್ಥೆಯ ಅಜಯ್ ಶೆಟ್ಟಿ ಅವರು ತಕ್ಷಣ ಸ್ಪಂದಿಸಿ, ತಮ್ಮ ವಾಹನದಲ್ಲಿದ್ದ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಕಾರ್ಯಕ್ಕೆ ವೇಗ ನೀಡಿದರು.
ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ಪ್ರಮುಖ ರಸ್ತೆಯ ಗುಂಡಿಗಳನ್ನು ಮುಚ್ಚಿರುವುದರಿಂದ ಸವಾರರು ಈಗ ನಿಟ್ಟುಸಿರು ಬಿಡುವಂತಾಗಿದೆ. ಸಮಾಜಮುಖಿ ಚಿಂತನೆಯೊಂದಿಗೆ ನಾಗರಿಕ ಪ್ರಜ್ಞೆ ಮೆರೆದ ಡಯಾನಾ ಸೆರಾವೊ, ವಲೇರಿಯನ್ ಪಿಂಟೋ, ಅಜಯ್ ಶೆಟ್ಟಿ ಮತ್ತು ಅಕ್ಷಯ್ ಅವರ ತಂಡಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.