ಮೂಡುಬಿದಿರೆ: ಮಿಜಾರು–ಬೆಳೆಚ್ಚಾರು ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ಮಾರ್ಗವನ್ನು ಬಂದ್ ಮಾಡಿರುವುದರಿಂದ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ಕಿಲೋಮೀಟರ್‌ಗಟ್ಟಲೆ ಸುತ್ತಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಯದ ಅಭಾವದಿಂದ ಹಲವರು ಡಿವೈಡರ್ ಹಾರಿ ರಸ್ತೆ ದಾಟುತ್ತಿರುವುದು ಮತ್ತಷ್ಟು ಅಪಘಾತಗಳಿಗೆ ಕಾರಣವಾಗುವ ಆತಂಕ ವ್ಯಕ್ತವಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಪಾದಚಾರಿಯೊಬ್ಬರು ಅಪಘಾತದಲ್ಲಿ ಮೃತಪಟ್ಟ ಘಟನೆ ಸೇರಿದಂತೆ ಹಲವು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಅಂಡರ್‌ಪಾಸ್ ನಿರ್ಮಾಣ ಹಾಗೂ ಇರುವೈಲು ಸಂಪರ್ಕ ರಸ್ತೆಗೆ ಸುರಕ್ಷಿತ ತಿರುವು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ಹೆದ್ದಾರಿ ಕಾಮಗಾರಿ ಆರಂಭಕ್ಕೂ ಮುನ್ನವೇ ಪಂಚಾಯತ್ ಮೂಲಕ ಸಂಸದ ಬ್ರಿಜೇಶ್ ಚೌಟ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ, ಅಂಡರ್‌ಪಾಸ್ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೀಡಿಯನ್ ಓಪನಿಂಗ್ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ. ಕಾನೂನು ಹಾಗೂ ಸುರಕ್ಷತಾ ಮಾನದಂಡಗಳಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಎಚ್ಚರಿಕೆ ಫಲಕ, ವೇಗ ನಿಯಂತ್ರಣ ಸೂಚನಾ ಫಲಕ, ಹೈಮಾಸ್ಟ್ ದೀಪ, ಬ್ಯಾರಿಕೇಡ್ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಮಿಜಾರು–ಬೆಳೆಚ್ಚಾರು ಜಂಕ್ಷನ್‌ನಿಂದ ಇರುವೈಲು ಸಂಪರ್ಕ ರಸ್ತೆಗೆ ಸೂಕ್ತ ತಿರುವು ವ್ಯವಸ್ಥೆ ಇಲ್ಲದಿರುವುದರಿಂದ ಸಾವಿರಾರು ವಾಹನ ಸವಾರರು ಹೆಚ್ಚುವರಿ ಸುತ್ತು ಬಳಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದರು. ಈ ಕುರಿತು ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಶೀಘ್ರ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ಬಡಗ ಎಡಪದವು ಪಂಚಾಯತ್‌ನ ಮಾಜಿ ಅಧ್ಯಕ್ಷ ಹರೀಶ್ ಕೆ.ವಿ., ಮೊಯಿದ್ದೀನ್ ಬಾವಾ, ರಾಮಣ್ಣ ಶೆಟ್ಟಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚಂದ್ರಹಾಸ, ಶಿವಪ್ರಸಾದ್ ಬಾನೊಟ್ಟು, ಅಶೋಕ್ ಶೆಟ್ಟಿ, ಪ್ರಸಾದ್ ಎಡಪದವು, ಹೇಮಚಂದ್ರ ಶೆಟ್ಟಿ, ಹಿಮಕರ್ ಖಂಡೆಮಾರ್, ತಾರಾನಾಥ್ ಸಾಲ್ಯಾನ್, ರಿಯಾಜ್, ಅಸ್ಪಾಕ್, ತಾಹೀರ್, ತಾರಾನಾಥ್ ಸಪಳಿಗ, ಉಮೇಶ್ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.