ಮೂಡುಬಿದಿರೆ: ಸರ್ಕಾರ ಮಾಡಬೇಕಾದ ಅನೇಕ ಜನಪರ ಸೇವಾ ಕಾರ್ಯಗಳನ್ನು ರೋಟರಿ ಕ್ಲಬ್ ನಿರ್ವಹಿಸುತ್ತಿದ್ದು, ಸಮಾಜಸೇವೆ, ಆರೋಗ್ಯ, ವಸತಿ ಮತ್ತು ಸ್ವಚ್ಛತೆ ಕ್ಷೇತ್ರಗಳಲ್ಲಿ ವಿಶ್ವದಾದ್ಯಂತ ಜನಪರ ಕಾರ್ಯಗಳನ್ನು ನಡೆಸುತ್ತಿದೆ ಎಂದು ರೋಟರಿ ಜಿಲ್ಲೆ 3181ರ ಮಾಜಿ ಜಿಲ್ಲಾ ಗವರ್ನರ್ ಎ.ಆರ್. ರವೀಂದ್ರ ಭಟ್ ಹೇಳಿದರು.
ಮೂಡುಬಿದಿರೆಯ ನಿಶ್ಮಿತ ಟವರ್ಸ್ ಪ್ಯಾರಡೈಸ್ ಮಲ್ಟಿಪರ್ಪಸ್ ಹಾಲ್‌ನಲ್ಲಿ ನಡೆದ ರೋಟರಿ ಕ್ಲಬ್‌ನ 2026–27ನೇ ಸಾಲಿನ ಡಾ. ಆಶೀರ್ವಾದ ಎಂ.ಪಿ. ನೇತೃತ್ವದ ನೂತನ ತಂಡದ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ವಿಶ್ವದಾದ್ಯಂತ ಸುಮಾರು 12 ಲಕ್ಷ ಸದಸ್ಯರನ್ನು ಹೊಂದಿರುವ ರೋಟರಿ ಕ್ಲಬ್ ಗೆಳೆತನದ ಮೂಲಕ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಕ್ಲಬ್‌ನ ಚಟುವಟಿಕೆಗಳ ಮೂಲಕ ಉತ್ತಮ ಸಂಪರ್ಕ ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಸಾಧಿಸಲು ಸಾಧ್ಯ ಎಂದು ಹೇಳಿದರು.
ನೂತನ ಅಧ್ಯಕ್ಷ ಡಾ. ಆಶೀರ್ವಾದ ಎಂ.ಪಿ. ಮಾತನಾಡಿ, "ಒಗ್ಗೂಡಿ ಸೇವೆ ಮಾಡೋಣ" ಎಂಬ ಪರಿಕಲ್ಪನೆಯಡಿ ಕ್ಲಬ್ ಕಾರ್ಯನಿರ್ವಹಿಸಲಿದ್ದು, ಪ್ರತಿಯೊಬ್ಬ ಸದಸ್ಯನಿಗೂ ಗೌರವ ನೀಡುವ ಹಾಗೂ ಜನರ ಜೀವನಮಟ್ಟವನ್ನು ಉನ್ನತೀಕರಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಲಾಯಿತು. ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಬಿ. ಶ್ರೀಕಾಂತ್ ಕಾಮತ್ ಹಾಗೂ ಝೋನಲ್ ಲೆಫ್ಟಿನೆಂಟ್ ಪೂರ್ಣಚಂದ್ರ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪುರಸಭೆಯ ಇಂಜಿನಿಯರ್ ಶಿಲ್ಪಾ ಸ್ವಚ್ಛತಾ ಕಾರ್ಯಕ್ಕಾಗಿ ರೋಟರಿ ಕ್ಲಬ್‌ಗೆ ಪ್ರಮಾಣಪತ್ರ ಹಸ್ತಾಂತರಿಸಿದರು.
ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಮೋಹನ್ ಕುಮಾರ್, ರಮೇಶ್ ಹಾಗೂ ಸರಿತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರಕ್ಷಾ ಹಾಗೂ ಬೆನ್ನುಮೂಳೆ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿರುವ ದಿನೇಶ್ ಅವರಿಗೆ ಚಿಕಿತ್ಸೆಗೆ ಸಹಾಯಧನ ವಿತರಿಸಲಾಯಿತು. ಸಚ್ಚೇರಿಪೇಟೆ ಅಂಗನವಾಡಿಗೆ ಮಿಕ್ಸಿ ಹಸ್ತಾಂತರಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷ ನಾಗರಾಜ್ ಹೆಗ್ಡೆ ಮಾತನಾಡಿ, ತಮ್ಮ ಅವಧಿಯಲ್ಲಿ ಸಹಕರಿಸಿದ ಸದಸ್ಯರನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್‌ನ 'ರೋಟಾದ್ರಿ' ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಂಪಾದಕ ಎಸ್.ಎನ್. ಬೋರ್ಕರ್ ಸಂಚಿಕೆ ಬಿಡುಗಡೆಗೆ ಸಹಕರಿಸಿದರು.
ನಿಕಟ ಪೂರ್ವ ಕಾರ್ಯದರ್ಶಿ ಪವನ್ ಪೈ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ವಂದಿಸಿದರು. ಜೆ.ಜೆ. ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಕಿಣಿ, ನಾಗರಾಜ್ ಬಿ., ಮಹಮದ್ ಆರೀಫ್, ಸುದೇಶ್ ಜೈನ್ ಹಾಗೂ ರೂಪೇಶ್ ಅತಿಥಿಗಳನ್ನು ಪರಿಚಯಿಸಿದರು. ಅಬ್ದುಲ್ ಗಫೂರ್, ಡಾ. ರಮೇಶ್ ಹಾಗೂ ಅವಿಲ್ ಡಿಸೋಜಾ ಪ್ರತಿಭಾನ್ವಿತರನ್ನು ಪರಿಚಯಿಸಿದರು.