ಉಪ್ಪಿನಂಗಡಿ: ವಿಶೇಷ ಸಹಕಾರಿ ಸಪ್ತಾಹದ ಅಂಗವಾಗಿ ಸಹಕಾರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೇತೃತ್ವದಲ್ಲಿ ಯುವವಾಹಿನಿ ಉಪ್ಪಿನಂಗಡಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಹಾಗೂ ಜೆಸಿಐ ಉಪ್ಪಿನಂಗಡಿ ಸಹಯೋಗದೊಂದಿಗೆ ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ವೈದ್ಯರ ತಂಡದಿಂದ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 112ನೇ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಉದ್ಘಾಟಿಸಿ ಮಾತನಾಡಿ, 2012ರಲ್ಲಿ ಕೇವಲ ಮೂವರು ಸಿಬ್ಬಂದಿ ಹಾಗೂ 22 ಲಕ್ಷ ರೂ. ಠೇವಣಿಯಿಂದ ಆರಂಭವಾದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಇಂದು 320 ಕೋಟಿ ರೂ.ಗೂ ಅಧಿಕ ಠೇವಣಿ ಹೊಂದಿದ್ದು, ವಾರ್ಷಿಕ 3,000 ಕೋಟಿ ರೂ.ಗೂ ಮಿಕ್ಕಿ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಸಾಧನೆಯಾಗಿದೆ ಎಂದರು. ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸ ಗಳಿಸಿರುವ ಸಂಘವು ಮುಂದಿನ ದಿನಗಳಲ್ಲಿ ರಾಜ್ಯದ ಮಾದರಿ ಸಹಕಾರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ರೋಟರಿ ಕ್ಲಬ್ ಝೋನ್–4 ಅಸಿಸ್ಟೆಂಟ್ ಗವರ್ನರ್ ರಾಜಾರಾಂ ಕೆ. ಬಿ. ಮಾತನಾಡಿ, ಅಲ್ಪಾವಧಿಯಲ್ಲಿ 35 ಶಾಖೆಗಳನ್ನು ಆರಂಭಿಸಿ 112ಕ್ಕೂ ಹೆಚ್ಚು ವೈದ್ಯಕೀಯ ಹಾಗೂ ಸಮಾಜಮುಖಿ ಶಿಬಿರಗಳನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕಳೆದ ವರ್ಷ ರೋಟರಿ ಕ್ಲಬ್‌ನ ಸಮಾಜಮುಖಿ ಸೇವೆಯನ್ನು ಗುರುತಿಸಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನೀಡಿದ 'ಅಭಿನಂದನ' ಪ್ರಶಸ್ತಿಯನ್ನು ಸ್ಮರಿಸಿದ ಅವರು, ಮುಂದೆಯೂ ಉಭಯ ಸಂಸ್ಥೆಗಳ ಸಹಯೋಗದಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಆಶಿಸಿದರು.

ಕೆಎಂಸಿ ಆಸ್ಪತ್ರೆ ಅತ್ತಾವರದ ಮುಖ್ಯಸ್ಥ ಆಶಿತ್ ಎಂ. ವಿ. ಮಾತನಾಡಿ, ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರಗಳ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸಂಘವು ನಿರಂತರವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದು, ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು. ಸಂಘದ ಉಪ್ಪಿನಂಗಡಿ ಶಾಖೆಯ ಬೆಳವಣಿಗೆಗೆ ಸಹಕರಿಸಿದ ಸದಸ್ಯರು, ಗ್ರಾಹಕರು, ಸಮಾಜಬಂಧುಗಳು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಆರೋಗ್ಯ ಶಿಬಿರದ ಆಯೋಜನೆಗೆ ಯುವವಾಹಿನಿ ಉಪ್ಪಿನಂಗಡಿ, ರೋಟರಿ ಕ್ಲಬ್ ಉಪ್ಪಿನಂಗಡಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು, ಜೆಸಿಐ ಉಪ್ಪಿನಂಗಡಿ, ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಸಹಕರಿಸಿದ್ದಾರೆ ಎಂದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ವಿ. ಹಿರೇಮಠ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್, ಹಿರಿಯ ಮಾರ್ಗದರ್ಶಕ ವರದರಾಜ್ ಎಂ., ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಜಯವಿಕ್ರಮ್, ರೋಟರಿ ಕ್ಲಬ್ ಉಪ್ಪಿನಂಗಡಿ ಅಧ್ಯಕ್ಷ ಕೇಶವ ಪಿ. ಎಂ., ಜೆಸಿಐ ಉಪ್ಪಿನಂಗಡಿ ಅಧ್ಯಕ್ಷ ಅವನೀಶ್ ಭಟ್, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತಯ್ಯ, ಎಚ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕಿ ಚಂದ್ರಾವತಿ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ವೈದ್ಯೆ ಸೌಮ್ಯ ಉಪಸ್ಥಿತರಿದ್ದರು. ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸೆಯ ಪ್ರಯೋಜನ ಪಡೆದರು. ಯುವವಾಹಿನಿ ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ರಮೇಶ್ ಸ್ವಾಗತಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ವಂದಿಸಿದರು. ಸಂಘದ ಶಾಖಾಧಿಕಾರಿ ಧನಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.