ಮೂಡುಬಿದಿರೆ: ಬನ್ನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಅಪಘಾತ ವಲಯದಲ್ಲೇ ರಾಂಗ್ ಸೈಡ್‌ನಲ್ಲಿ ಡಿಬಿಎಲ್ ಕಂಪನಿಗೆ ಸೇರಿದ ಲಾರಿಯೊಂದು ಕಳೆದ ಮೂರು ದಿನಗಳಿಂದ ಕೆಟ್ಟು ನಿಂತಿದ್ದು, ವಾಹನ ಸವಾರರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶ ನೋಂದಣಿಯ HP 04 HE 2256 ಸಂಖ್ಯೆಯ ಲಾರಿಯನ್ನು ಇದುವರೆಗೆ ದುರಸ್ತಿ ಮಾಡದೇ ಅಥವಾ ಸ್ಥಳಾಂತರಿಸದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಪಘಾತಗಳಿಗೆ ಕುಖ್ಯಾತಿಯಾಗಿರುವ ಈ ಸ್ಥಳದಲ್ಲಿ ರಾಂಗ್ ಸೈಡ್‌ನಲ್ಲಿ ಲಾರಿ ನಿಂತಿರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಶೇಷವಾಗಿ ರಾತ್ರಿ ಹಾಗೂ ಮಳೆಯ ಸಂದರ್ಭಗಳಲ್ಲಿ ಲಾರಿ ಸಮಯಕ್ಕೆ ಗೋಚರಿಸದ ಕಾರಣ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ವಾಹನ ಸವಾರರು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಡಿಬಿಎಲ್ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಲಾರಿಯನ್ನು ತೆರವುಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.