ಮೂಡುಬಿದಿರೆ: ಬೆಳುವಾಯಿ ಸಮೀಪದ ಚಿಲಿಂಬಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ಗುಡ್ಡವನ್ನು ನೆಟ್ಟಗೆ ಕತ್ತರಿಸಿರುವುದರ ಜೊತೆಗೆ ಮಳೆನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದಿರುವುದು ಭೂಕುಸಿತದ ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೃದುವಾದ ಶಿಲೆ, ಸಡಿಲ ಕೆಂಪು ಮಣ್ಣು ಹಾಗೂ ಮುರಕಲ್ಲುಗಳ ಮಿಶ್ರಣದಿಂದ ಕೂಡಿರುವ ಪ್ರದೇಶದಲ್ಲಿ ಮಳೆನೀರು ಶಿಲೆಯ ಸಂದಿಗಳಿಗೆ ನುಗ್ಗುತ್ತಿರುವುದು ಗುಡ್ಡದ ಸ್ಥಿರತೆಯನ್ನು ಮತ್ತಷ್ಟು ಕುಗ್ಗಿಸುತ್ತಿದೆ ಎನ್ನಲಾಗಿದೆ. ಸುರಕ್ಷಿತ ಇಳಿಜಾರಿನ ಬದಲು ಲಂಬವಾಗಿ ಗುಡ್ಡ ಕತ್ತರಿಸಿರುವುದರಿಂದ ಕುಸಿತದ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತುರ್ತಾಗಿ ಮಧ್ಯಪ್ರವೇಶಿಸಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.