ಮೂಡುಬಿದಿರೆ: ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳು, ಕಲ್ಲಬೆಟ್ಟು ಇಲ್ಲಿ ಅಂಚೆ ಇಲಾಖೆಯ ಜನಸಂಪರ್ಕ ಅಭಿಯಾನದ ಅಂಗವಾಗಿ ಶಿಕ್ಷಕರಿಗೆ ಅಂಚೆ ಇಲಾಖೆಯ ಮಾಹಿತಿ ಕಾರ್ಯಗಾರ ನಡೆಯಿತು. ಅಂಚೆ ಇಲಾಖೆಯ ವಿವಿಧ ಸೇವೆಗಳು, ಜನಪರ ಯೋಜನೆಗಳು ಹಾಗೂ ಡಿಜಿಟಲ್ ಯುಗದಲ್ಲಿ ಇಲಾಖೆಯ ಬದಲಾಗುತ್ತಿರುವ ಕಾರ್ಯವೈಖರಿಯ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಗಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಗುರುಪ್ರಸಾದ್ ಅಂಚೆ ಇಲಾಖೆಯ ವ್ಯಾಪಕ ಸೇವೆಗಳ ಕುರಿತು ವಿವರಿಸಿದರು. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಉಳಿತಾಯ ಯೋಜನೆಗಳು, ವಿಮಾ ಸೇವೆಗಳು, ಅಂಚೆ ಬ್ಯಾಂಕಿಂಗ್, ಗ್ರಾಮೀಣ ಜನರಿಗೆ ಆರ್ಥಿಕ ಸೇವೆಗಳ ವಿಸ್ತರಣೆ ಹಾಗೂ ಪಾರ್ಸೆಲ್ ಸೇವೆ ಸೇರಿದಂತೆ ಹಲವು ಜನಪರ ಸೇವೆಗಳನ್ನು ಒದಗಿಸುತ್ತಿದೆ ಎಂದರು. ತಂತ್ರಜ್ಞಾನ ಅಳವಡಿಸಿಕೊಂಡಿರುವ ಅಂಚೆ ಇಲಾಖೆ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದ್ದು, ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಈ ಸೇವೆಗಳ ಉಪಯುಕ್ತ ಮಾಹಿತಿಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಜ್ಞಾನ ನೀಡುವ ಕೇಂದ್ರಗಳಾಗಿರದೆ ಸಮಾಜದ ವಿವಿಧ ವ್ಯವಸ್ಥೆಗಳ ಕುರಿತು ಜಾಗೃತಿ ಮೂಡಿಸುವ ವೇದಿಕೆಗಳಾಗಬೇಕು ಎಂದರು. ಅಂಚೆ ಇಲಾಖೆಯಂತಹ ಜನಸೇವಾ ಸಂಸ್ಥೆಗಳ ಕಾರ್ಯವೈಖರಿಯನ್ನು ಶಿಕ್ಷಕರು ಅರಿತುಕೊಳ್ಳುವುದು ಅಗತ್ಯವಾಗಿದ್ದು, ಇಂತಹ ಕಾರ್ಯಗಾರಗಳು ಶಿಕ್ಷಕರ ಜ್ಞಾನ ವಿಸ್ತರಣೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಸೇವೆಗಳ ಕುರಿತು ಅರಿವು ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಕೊಡಂಗಲ್ಲಿನ ಸಬ್ ಪೋಸ್ಟ್ ಮಾಸ್ಟರ್ ಉಮಾ, ಅಂಚೆ ಕಚೇರಿ ಸಿಬ್ಬಂದಿ, ಸಿಬಿಎಸ್‌ಸಿ ಶಾಲೆಯ ಪ್ರಾಂಶುಪಾಲ ಶ್ರೀಪ್ರಸಾದ್ ಉಪಸ್ಥಿತರಿದ್ದರು.
ಶಿಕ್ಷಕ ಪಾರ್ಶ್ವನಾಥ ಜೈನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಗಾರದಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳು, ಸೇವೆಗಳ ಉಪಯೋಗ, ಡಿಜಿಟಲ್ ಅಂಚೆ ಸೇವೆಗಳ ಮಹತ್ವ ಹಾಗೂ ಸಾರ್ವಜನಿಕರೊಂದಿಗೆ ಇಲಾಖೆಯ ನಂಟಿನ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಿ ಉಪಯುಕ್ತ ಮಾಹಿತಿ ಪಡೆದುಕೊಂಡರು.