ಮೂಡುಬಿದಿರೆ: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಪವರ್ ಫ್ರೆಂಡ್ಸ್ ಬೆದ್ರ ಹಾಗೂ ದಾನಿಗಳ ನೆರವಿನಿಂದ ಮಾರೂರಿನ ವಸತಿ ರಹಿತ ನಿಷ್ಣಾತ ಕುಶಲಕರ್ಮಿ ಸರಸ್ವತಿ ಸದಾಶಿವ ಆಚಾರ್ಯರ ಕುಟುಂಬಕ್ಕೆ ನಿರ್ಮಿಸಿಕೊಟ್ಟಿರುವ "ಶ್ರೀ ಕಾಳಿಕಾಂಬ" ಹೆಸರಿನ ನೂತನ ಮನೆ ಹಸ್ತಾಂತರ ಕಾರ್ಯಕ್ರಮ ಬುಧವಾರ ಮಾರೂರಿನಲ್ಲಿ ನಡೆಯಿತು.
ಮನೆ ಹಸ್ತಾಂತರಿಸಿ ಮಾತನಾಡಿದ ರೋಟರಿ ಜಿಲ್ಲೆ 3181ರ ವಲಯ 1ರ ಅಸಿಸ್ಟೆಂಟ್ ಗವರ್ನರ್ ಜೋಯೆಲ್ ಡಿಸೋಜ, ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ದಾನಿಗಳ ನೆರವನ್ನು ಒಟ್ಟುಗೂಡಿಸಿ ಅವರಿಗೆ ಸೂರು ಕಲ್ಪಿಸುವುದು ಅತ್ಯುತ್ತಮ ಸೇವಾಕಾರ್ಯವಾಗಿದೆ. ಇಂತಹ ಜನಪರ ಸೇವೆಗಳನ್ನು ರೋಟರಿ ಮಿಡ್ ಟೌನ್ ನಿರಂತರವಾಗಿ ಮುಂದುವರಿಸಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ಧುರೀಣ ಪಡುಮಾರ್ನಾಡು ದಯಾನಂದ ಪೈ ಮಾತನಾಡಿದರು. ರೋಟರಿ ಜಿಲ್ಲೆ 3181ರ ವಲಯ 1ರ ಮಾಜಿ ಅಸಿಸ್ಟೆಂಟ್ ಗವರ್ನರ್ ರೋಬರ್ಟ್ ಫ್ರಾಂಕ್ಲಿನ್ ರೇಗೋ ಹಾಗೂ ಮಿಡ್ ಟೌನ್ ರೋಟರಿಯ ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ ಕೂಡ ಮಾತನಾಡಿದರು.
ಮನೆಯ ನಿರ್ಮಾಣಕ್ಕೆ ಸಹಕಾರ ನೀಡಿದ ಪ್ರಮುಖ ದಾನಿ ಇರುವೈಲು ಕುಮಾರ ಪೂಜಾರಿ, ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯಕುಮಾರ್, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಅವರನ್ನು ಬಲಿಪ ಪ್ರಸಾದ ಭಾಗವತ ಪಂಚಾಶತ್ ಸ್ಮರಣ್ ಪಂಚಾಶತ್ ಸಮ್ಮಾನ್ ಸರಣಿ ಕಾರ್ಯಕ್ರಮದ ವತಿಯಿಂದ ಸನ್ಮಾನಿಸಲಾಯಿತು. ದಾನಿಗಳಾದ ಸಿ. ಎಚ್. ಅಬ್ದುಲ್ ಗಫೂರ್, ತುಳುನಾಡ ಸೇನೆಯ ಸಂಸ್ಥಾಪಕ ಸುರೇಶ್ ಶೆಟ್ಟಿ ಹರಿಮೀನಾಕ್ಷಿಯವರ ಪರವಾಗಿ ಲಕ್ಷ್ಮೀಶ ಶೆಟ್ಟಿ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಧ್ಯಕ್ಷ ಸುನಿಲ್ ಮೆಂಡೋನ್ಸಾ ಸೇರಿದಂತೆ ಹಲವರನ್ನು ಗೌರವಿಸಲಾಯಿತು.
ರೋಟರಿ ಮಿಡ್ ಟೌನ್‌ನ ನೂತನ ಅಧ್ಯಕ್ಷ ಮುರಳೀದರ ಕೋಟ್ಯಾನ್, ನಿರ್ಗಮನ ಅಧ್ಯಕ್ಷ ಕರುಣಾಕರ ದೇವಾಡಿಗ, ಅಭಿನಂದನ್ ಬಲ್ಲಾಳ್, ವಲಯ ಸೇನಾನಿ ವಿದೇಶ್ ಎಂ., ಸುಶಾಂತ ಕರ್ಕೇರ, ಸ್ಥಾಪಕ ಅಧ್ಯಕ್ಷ ಮಹಮ್ಮದ್ ಅಸ್ಲಮ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ, ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಗಣೇಶ್ ನಾಯಕ್ ಬಾರ್ದಿಲ, ಶಂಕರ ಆಚಾರ್ಯ ಮಾರೂರು, ಉಪಸ್ಥಿತರಿದ್ದರು.
ಆಲ್ವಿನ್ ಮಿನೇಜಸ್ ಸನ್ಮಾನ ಪತ್ರ ವಾಚಿಸಿದರು. ಪ್ರಶಾಂತ್ ಕೆ. ಭಂಡಾರಿ ಹಾಗೂ ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.