ಮೂಡುಬಿದಿರೆ: ಇಲ್ಲಿನ ಹೊಸಬೆಟ್ಟು ಮೂಲದ ಯುವ ಲೇಖಕಿ, ವಾಗ್ಮಿ ಹಾಗೂ ಎಸ್‌ಡಿಎಂ ಕಾನೂನು ಕಾಲೇಜಿನ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ರಿಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರಿಗೆ ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರದಲ್ಲಿನ ಗಮನಾರ್ಹ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ಹೋಟೆಲ್ ಗ್ರೀನ್‌ಪಾರ್ಕ್‌ನಲ್ಲಿ ನಡೆದ 'ದ ಸ್ತ್ರೀ' ಹಾಗೂ 'ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್' ಜಂಟಿ ಆಶ್ರಯದ ಕಾರ್ಯಕ್ರಮದಲ್ಲಿ 'ಲೀಡ್ ಹರ್' (LEAD HER) ಗೌರವ ನೀಡಿ ಸನ್ಮಾನಿಸಲಾಯಿತು.
ಡಾ. ಪೂಜಾ ನಿಗಮ್, ಅಂತಾರಾಷ್ಟ್ರೀಯ ಪೇಜಂಟ್ ವಿಜೇತೆ ಭಾವನಾ, ಕರ್ನಲ್ ಜಯಶ್ರೀ, ಛಾಯಾ ಗಾಂಧಿ ಹಾಗೂ ಇತರ ಗಣ್ಯರು ರಿಶೆಲ್ ಫೆರ್ನಾಂಡಿಸ್ ಅವರನ್ನು ಗೌರವಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆಯಾಗಿರುವ ರಿಶೆಲ್ ಫೆರ್ನಾಂಡಿಸ್ ಅವರು ಭಾರತ @2047: ಯುವಕರ ಪಾತ್ರ ಹಾಗೂ ಪ್ರಜಾಪ್ರಭುತ್ವದ ಸುರಾಜ್ಯ – ಉತ್ತಮ ಆಡಳಿತ ಚಕ್ರ ಸೇರಿದಂತೆ ಹಲವು ಸಮಕಾಲೀನ ವಿಷಯಗಳ ಕುರಿತು ಲೇಖನಗಳನ್ನು ರಚಿಸಿ ಗುರುತಿಸಿಕೊಂಡಿದ್ದಾರೆ. ಅವರ ಬರವಣಿಗೆಯನ್ನು ಭಾರತದ ಪ್ರಧಾನ ಮಂತ್ರಿ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, 2025ರಲ್ಲಿ ಭಾರತ್ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ದೇಶರತ್ನ ಪ್ರಶಸ್ತಿ ಹಾಗೂ ಭಾರತೀಯ ಕ್ಯಾಥೋಲಿಕ್ ಪತ್ರಿಕಾ ಸಂಘದಿಂದ ಜೆ. ಮೌರಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2025ರ ಟಾಪ್–10 ಲೇಖಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅವರು ಆಧುನಿಕ ಭಾರತದ ಧ್ವನಿ ಎಂದೂ ಗುರುತಿಸಿಕೊಂಡಿದ್ದಾರೆ.