ಮೂಡುಬಿದಿರೆ: ನಿಡ್ಡೋಡಿಯ ಜ್ಞಾನರತ್ನ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದ ಶ್ರೀ ದುರ್ಗಾದೇವಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವನಮಹೋತ್ಸವ ಹಾಗೂ ಹಸಿರು ದಿನಾಚರಣೆ ನಡೆಯಿತು. ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಸಂಗೀತಾ ಭಾಸ್ಕರ್ ದೇವಸ್ಯ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ವನಮಹೋತ್ಸವದ ಮಹತ್ವವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಮೂಲಕ ಪರಿಸರ ಜಾಗೃತಿ ಮತ್ತು ಹಸಿರು ಸಂರಕ್ಷಣೆಯ ಸಂದೇಶವನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಯಿತು.
ಆಡಳಿತಾಧಿಕಾರಿ ಸಾಗರ್, ಪ್ರಾಂಶುಪಾಲೆ ಅನುರಾಧಾ ಸಾಲ್ಯಾನ್ , ಮುಖ್ಯೋಪಾಧ್ಯಾಯಿನಿ ಸೀಮಾ ಹಾಗೂ ಸಹ-ಮುಖ್ಯೋಪಾಧ್ಯಾಯಿನಿ ಜಯಶ್ರೀ ಉಪಸ್ಥಿತರಿದ್ದರು.