ಮೂಡುಬಿದಿರೆ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಆಯ್ಕೆ ಪ್ರಕ್ರಿಯೆಯಲ್ಲಿ ಪಠ್ಯಜ್ಞಾನಕ್ಕಿಂತ ಅಭ್ಯರ್ಥಿಗಳ ನಾಯಕತ್ವ ಗುಣ, ವ್ಯಕ್ತಿತ್ವ, ತಾರ್ಕಿಕ ಚಿಂತನೆ ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಮಂಗಳೂರು ಸೇನಾ ನೇಮಕಾತಿ ಕಚೇರಿಯ ನಿರ್ದೇಶಕ ಕರ್ನಲ್ ಸೋಮು ಜಿ ಮಹಾರಾಜನ್ ಹೇಳಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಎನ್‌ಡಿಎ ಆಕಾಂಕ್ಷಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ) ಆಯ್ಕೆ ಪ್ರಕ್ರಿಯೆಯು ಕೇವಲ ಶೈಕ್ಷಣಿಕ ಸಾಧನೆಯನ್ನು ಮಾತ್ರ ಪರೀಕ್ಷಿಸುವುದಿಲ್ಲ ಎಂದರು. ಅಭ್ಯರ್ಥಿಯ ವ್ಯಕ್ತಿತ್ವ, ಭಾವನಾತ್ಮಕ ಸ್ಥಿರತೆ, ಸಂವಹನ ಕೌಶಲ್ಯ, ಸಮಸ್ಯೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹಾಗೂ ಒತ್ತಡದ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಗುಣಗಳನ್ನು ವಿವಿಧ ಹಂತಗಳಲ್ಲಿ ಸಮಗ್ರವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ತಿಳಿಸಿದರು.
ಮನೋವೈಜ್ಞಾನಿಕ ಪರೀಕ್ಷೆಗಳು, ಗುಂಪು ಚರ್ಚೆಗಳು, ನಾಯಕತ್ವ ಚಟುವಟಿಕೆಗಳು, ಸಮಸ್ಯೆ ಪರಿಹಾರ ಕಾರ್ಯಗಳು ಹಾಗೂ ವೈಯಕ್ತಿಕ ಸಂದರ್ಶನಗಳ ಮೂಲಕ ಅಭ್ಯರ್ಥಿಯ ಆಲೋಚನಾ ವಿಧಾನ, ತಂಡದೊಂದಿಗೆ ಕಾರ್ಯನಿರ್ವಹಿಸುವ ಮನೋಭಾವ, ಸಂವಹನ ಕೌಶಲ್ಯ ಮತ್ತು ನಾಯಕತ್ವ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕಂಠಪಾಠ ಮಾಡಿದ ಅಥವಾ ಪೂರ್ವಸಿದ್ಧ ಉತ್ತರಗಳಿಗಿಂತ ಸಹಜ ವ್ಯಕ್ತಿತ್ವ, ನೈಜ ಆಲೋಚನಾ ವಿಧಾನ ಮತ್ತು ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಯಾವುದೇ ಸಮಸ್ಯೆಯನ್ನು ಅದರ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎನ್‌ಡಿಎ ಪರೀಕ್ಷೆ ಮತ್ತು ಎಸ್‌ಎಸ್‌ಬಿ ಸಂದರ್ಶನಕ್ಕೆ ಸಿದ್ಧರಾಗುವವರು ಸಾಮಾನ್ಯ ಜ್ಞಾನ, ಸಂವಹನ ಕೌಶಲ್ಯ, ದೇಹಭಾಷೆ ಹಾಗೂ ದೈಹಿಕ ಸಾಮರ್ಥ್ಯವನ್ನು ನಿರಂತರವಾಗಿ ಅಭಿವೃದ್ಧಿಪಡಿಸಬೇಕು. ಆಲೋಚನೆ, ಮಾತು ಮತ್ತು ಕಾರ್ಯಗಳಲ್ಲಿ ಹೊಂದಾಣಿಕೆ ಕಾಯ್ದುಕೊಳ್ಳುವುದು ಭವಿಷ್ಯದ ಅಧಿಕಾರಿಗಳಿಗೆ ಅತ್ಯಗತ್ಯ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಸದಾಕತ್ ಮಾತನಾಡಿ, ದೇಶಸೇವೆಯ ಕನಸು ಕಾಣುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಯು ಪ್ರತಿಷ್ಠಿತ ಅವಕಾಶವಾಗಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಯಸುವವರಿಗೆ ಇದು ಅತ್ಯುತ್ತಮ ಪ್ರವೇಶದ್ವಾರವಾಗಿದೆ. ದೇಶದ ಅತ್ಯಂತ ಕಠಿಣ ಹಾಗೂ ಗೌರವಾನ್ವಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾದ ಎನ್‌ಡಿಎ ಪರೀಕ್ಷೆಯು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯದ ಜೊತೆಗೆ ನಾಯಕತ್ವ, ವ್ಯಕ್ತಿತ್ವ ಹಾಗೂ ರಾಷ್ಟ್ರಸೇವೆಯ ಬದ್ಧತೆಯನ್ನೂ ಪರೀಕ್ಷಿಸುತ್ತದೆ ಎಂದು ಹೇಳಿದರು.
ಬಳಿಕ ನಡೆದ ಪ್ರಶ್ನೋತ್ತರ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಹಾಗೂ ಭಾರತೀಯ ಸಶಸ್ತ್ರ ಪಡೆಗಳಲ್ಲಿನ ವೃತ್ತಿ ಅವಕಾಶಗಳ ಕುರಿತು ತಮ್ಮ ಸಂದೇಹಗಳಿಗೆ ಉತ್ತರ ಪಡೆದರು. ವಿಖ್ಯಾತ ಭಟ್, ದೇವಿಪ್ರಸಾದ್ ಪದ್ಮಾರ್ ಉಪಸ್ಥಿತರಿದ್ದರು. ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.