ಮೂಡುಬಿದಿರೆ: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಹೆಬ್ಬಾಳ, ಬೆಂಗಳೂರು ಹಾಗೂ ಶ್ರೀ ರಾಜ್ ಫಿಶ್ ಪಾರ್ಮ್, ಪಣಪಿಲ ಇವರ ಸಹಯೋಗದಲ್ಲಿ ಮೀನು ಕೃಷಿಕರ ದಿನಾಚರಣೆಯ ಅಂಗವಾಗಿ 5ನೇ ವರ್ಷದ ಮತ್ಸ್ಯ ಮೇಳವು ಜುಲೈ 11 ಮತ್ತು 12ರಂದು ಕೊಟ್ಟಾರಿಬೆಟ್ಟು, ಪಣಪಿಲದಲ್ಲಿರುವ ಶ್ರೀ ರಾಜ್ ಫಿಶ್ ಪಾರ್ಮ್‌ನಲ್ಲಿ ನಡೆಯಲಿದೆ.

ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಹೆಬ್ಬಾಳ, ಬೆಂಗಳೂರಿನ ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್ ಎನ್. ಸಮಗ್ರ ಮೀನು ಕೃಷಿ ಕುರಿತು ತರಬೇತಿ ಮತ್ತು ಮಾಹಿತಿ ನೀಡಲಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡದ ವಿಜ್ಞಾನಿ (ಸಸ್ಯ ಸಂರಕ್ಷಣೆ) ಡಾ. ಕೇದಾರನಾಥ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಜೀವಂತ ದೊಡ್ಡ ಗಾತ್ರದ ಮೀನುಗಳ ಮಾರಾಟ ಹಾಗೂ ವಿವಿಧ ಜಾತಿಯ ಮೀನುಮರಿಗಳ ವಿತರಣೆ ನಡೆಯಲಿದೆ. ಶುದ್ಧ ನೀರಿನಲ್ಲಿ ನೈಸರ್ಗಿಕ ಆಹಾರ ನೀಡಿ ಪೌಷ್ಟಿಕವಾಗಿ ಬೆಳೆಸಿರುವ ತಾಜಾ ಮೀನುಗಳು ಗ್ರಾಹಕರಿಗೆ ಲಭ್ಯವಿರಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾಟ್ಲ, ರೋಹು, ಗ್ರಾಸ್ ಕಾರ್ಪ್, ಗೌರಿ, ಪಂಗೇಸಿಯಸ್, ತಿಲಾಪಿಯಾ, ರೂಪ್ ಚಂದ್ ಹಾಗೂ ಮುರೇಲ್ (ಮಡೆಂಜಿ) ಸೇರಿದಂತೆ ವಿವಿಧ ಜಾತಿಯ ಮೀನುಮರಿ ಮತ್ತು ದೊಡ್ಡ ಗಾತ್ರದ ಮೀನುಗಳು ಮಾರಾಟಕ್ಕೆ ಲಭ್ಯವಿರುತ್ತವೆ. ಮೀನು ಹಿಡಿಯುವಿಕೆ ಹಾಗೂ ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.

ಆಸಕ್ತ ರೈತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ಆಯೋಜಕರಾದ ರಾಜ್, ಕೊಟ್ಟಾರಿಬೆಟ್ಟು, ಪಣಪಿಲ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8722692863, 9353896205 ಹಾಗೂ 9972091217 ಸಂಖ್ಯೆಗಳನ್ನು ಸಂಪರ್ಕಿಸಬಹುದು.