ಮೂಡುಬಿದಿರೆ: ಗ್ರಾಮೀಣ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ದೀಪಂ ಇವೆಂಟ್ಸ್ ಹಾಗೂ ನಮ್ಮ ಕಾರ್ಲ ಮೀಡಿಯಾ ಆಶ್ರಯದಲ್ಲಿ ಆಯೋಜಿಸಿರುವ ಹಲಸು-ಮಾವು ಹಾಗೂ ಸ್ವದೇಶಿ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ಚಾಲನೆ ದೊರೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮೇಳ ಉದ್ಘಾಟಿಸಿ, ಗ್ರಾಮೀಣ ಭಾಗದ ರೈತರು, ಗೃಹ ಕೈಗಾರಿಕೆ ನಡೆಸುವವರು ಹಾಗೂ ಸ್ವದೇಶಿ ಉತ್ಪನ್ನ ತಯಾರಕರಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಇಂತಹ ಮೇಳಗಳು ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಾಗಿ ನಡೆಯಬೇಕು. ಗ್ರಾಹಕರಿಗೆ ಗುಣಮಟ್ಟದ ಹಲಸು, ಮಾವು ಸೇರಿದಂತೆ ವಿವಿಧ ದೇಶಿ ಹಣ್ಣು-ಹಂಪಲು ಹಾಗೂ ಸ್ವದೇಶಿ ಉತ್ಪನ್ನಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವುದರಿಂದ ಉತ್ತಮ ಖರೀದಿ ಅವಕಾಶ ದೊರೆಯುತ್ತದೆ. ಉತ್ಪಾದಕರು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದರಿಂದ ಎರಡೂ ವರ್ಗಕ್ಕೂ ಪ್ರಯೋಜನವಾಗಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಇಂದಿನ ಯುವಪೀಳಿಗೆ ಹಲಸು ಮತ್ತು ಮಾವಿನ ಹಣ್ಣಿನೊಂದಿಗೆ ಬೆಸೆದುಕೊಂಡಿದ್ದ ಗ್ರಾಮೀಣ ಜೀವನದ ಅನುಭವಗಳಿಂದ ದೂರವಾಗುತ್ತಿದೆ ಎಂದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಸ್ವದೇಶಿ ಉತ್ಪನ್ನಗಳ ಮೇಳಗಳು ನಮ್ಮ ಆಹಾರ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ವೇದಿಕೆಯಾಗಿವೆ. ಯುವಜನತೆ ಜಂಕ್ ಫುಡ್‌ಗಳಿಂದ ದೂರವಿದ್ದು, ಪೌಷ್ಟಿಕಾಂಶಯುಕ್ತ ಸ್ವದೇಶಿ ಹಣ್ಣು-ಹಂಪಲು ಹಾಗೂ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ಉದ್ಯಮಿ ಶ್ರೀಪತಿ ಭಟ್, ಬಿಜೆಪಿ ಮುಖಂಡ ಸುದರ್ಶನ್ ಎಂ., ಬಂಟರ ಸಂಘ ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ , ಸಮಾಜ ಮಂದಿರ ಕಾರ್ಯದರ್ಶಿ ಸುರೇಶ್ ಪ್ರಭು ಉಪಸ್ಥಿತರಿದ್ದರು. ಅರ್ಚನಾ ವಿಜಯ್ ಶೆಟ್ಟಿ ಸ್ವಾಗತಿಸಿದರು. ಶ್ವೇತಾ ಎಸ್. ಜೈನ್ ಕಾರ್ಯಕ್ರಮ ನಿರೂಪಿಸಿ, ಸುಧಾ ವಂದಿಸಿದರು.