ಮೂಡುಬಿದಿರೆ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಕೇವಲ ಹೊಸ ಕಲ್ಪನೆಗಳನ್ನು ಹೊಂದಿರುವುದಷ್ಟೇ ಸಾಲದು. ಅವುಗಳನ್ನು ಕಾರ್ಯರೂಪಕ್ಕೆ ತರುವ ಸಮರ್ಥ ತಂತ್ರ, ದೃಢ ಪ್ರಕ್ರಿಯೆ, ನಿರಂತರ ಪ್ರಯತ್ನ ಹಾಗೂ ಶಿಸ್ತು ಅಗತ್ಯ ಎಂದು ಖ್ಯಾತ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಹಾಗೂ ಮಾಸ್ಟರ್‌ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ವೇಣು ಶರ್ಮಾ ಹೇಳಿದರು.
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗ ಆಯೋಜಿಸಿದ್ದ ‘ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವ ಬಗೆ’ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಎಐ ಭಾರತಕ್ಕೆ ಬಂದರೆ ಉದ್ಯೋಗಗಳು ಕಡಿಮೆಯಾಗುತ್ತವೆ ಎಂಬ ಭಯ ಬೇಡ. ಭಾರತವು ಅಪಾರ ಜನಸಂಖ್ಯೆ ಹಾಗೂ ವೈವಿಧ್ಯಮಯ ಅಗತ್ಯಗಳನ್ನು ಹೊಂದಿರುವ ದೊಡ್ಡ ದೇಶವಾಗಿದ್ದು, ಇಲ್ಲಿ ತಂತ್ರಜ್ಞಾನವು ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುವುದಕ್ಕಿಂತ ಕೆಲಸದ ಗುಣಮಟ್ಟ, ಉತ್ಪಾದಕತೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. ಮಾಸ್ಟರ್‌ಚೆಫ್ ಇಂಡಿಯಾ ಸೆಮಿಫೈನಲಿಸ್ಟ್ ಆಗಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವೇಣು ಶರ್ಮಾರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಪ್ರಿಯಾ ಸಿಕ್ವೇರಾ ಉಪಸ್ಥಿತರಿದ್ದರು. ಹೃಷಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಮಾನ್ ಕಾರ್ಯಕ್ರಮ ಸಂಯೋಜಿಸಿದರು.