ಮೂಡುಬಿದಿರೆ: ಡಿಜಿಟಲ್ ಯುಗದ ಪ್ರತಿಭಾವಂತ ಉದ್ಯಮಿ, ಯಾಪ್ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅತುಲ್ ಹೆಗ್ಡೆ (53) ಜುಲೈ 7ರಂದು ಮುಂಬೈನ ಸ್ವಂತ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮಿಜಾರ್ ಸಮೀಪದ ತೋಡಾರು ಮೂಲದವರಾದ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ಜಾಹೀರಾತು, ಡಿಜಿಟಲ್ ಮಾರ್ಕೆಟಿಂಗ್, ತಂತ್ರಜ್ಞಾನ ಆಧಾರಿತ ಉದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿ ಭಾರತದ ಡಿಜಿಟಲ್ ಬೆಳವಣಿಗೆಯ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದರು.
ಮಿಜಾರಿನಿಂದ ಜಾಗತಿಕ ಡಿಜಿಟಲ್ ಕ್ಷೇತ್ರದವರೆಗೆ ತೋಡಾರುದ ಜೀವಂಧರ ಹೆಗ್ಡೆ, ಶಕುಂತಲಾ ದಂಪತಿಯ ಪುತ್ರನಾದ ಅತುಲ್ ಹೆಗ್ಡೆ, ಮುಂಬೈಯನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿದ್ದ ತಂದೆಯ ಸೇವಾ ಮನೋಭಾವ, ಜೈನ ಧರ್ಮದ ಅಹಿಂಸೆ, ಸತ್ಯ ಹಾಗೂ ಪರಿಶ್ರಮದ ಮೌಲ್ಯಗಳು ಅವರ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಭಾವ ಬೀರಿದ್ದವು. ಮುಂಬೈನ ಶೋನಿಮಾ ಅವರನ್ನು ವಿವಾಹವಾಗಿದ್ದ ಅವರು ಮಕ್ಕಳಿರಲಿಲ್ಲ. ಆದರೆ ಸಂಸ್ಥೆಯ ಸಿಬ್ಬಂದಿ ಹಾಗೂ ಸೃಜನಾತ್ಮಕ ತಂಡವನ್ನು ಕುಟುಂಬದವರಂತೆ ಕಾಣುತ್ತಿದ್ದರು.
ಮೂರು ದಶಕಗಳ ವೃತ್ತಿಜೀವನ 1990ರ ದಶಕದ ಮಧ್ಯಭಾಗದಲ್ಲಿ ಹವಾಸ್ ಸಂಸ್ಥೆಯಲ್ಲಿ ಕ್ಲೈಂಟ್ ಸರ್ವಿಸಸ್ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದ ಅತುಲ್ ಹೆಗ್ಡೆ, 2003ರಲ್ಲಿ ವ್ಯಾಸ್ ಜಿಯಾನೆಟ್ಟಿ ಕ್ರಿಯೇಟಿವ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 2008ರಲ್ಲಿ ಇಗ್ನಿಟೀ ಡಿಜಿಟಲ್ ಸರ್ವಿಸಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಾರತದ ಆರಂಭಿಕ ಡಿಜಿಟಲ್ ಮಾರ್ಕೆಟಿಂಗ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದರು. 2015ರಲ್ಲಿ ಸುಧೀರ್ ಮೆನನ್ ಜತೆ ರೇನ್‌ಮೇಕರ್ ವೆಂಚರ್ಸ್ ಸಂಸ್ಥೆಯನ್ನು ಸಹ-ಸ್ಥಾಪಿಸಿ ಆರಂಭಿಕ ಹಂತದ ತಂತ್ರಜ್ಞಾನ ಸಂಸ್ಥೆಗಳಿಗೆ ಹೂಡಿಕೆ ಹಾಗೂ ಮಾರ್ಗದರ್ಶನ ನೀಡಿದರು.
ಯಾಪ್ ಮೂಲಕ ಹೊಸ ಮೈಲಿಗಲ್ಲು 2016ರಲ್ಲಿ ಸ್ಥಾಪಿಸಿದ ಯಾಪ್ ಸಂಸ್ಥೆಯ ಮೂಲಕ ವಿನ್ಯಾಸ, ವಿಷಯ ಸೃಷ್ಟಿ, ಇನ್‌ಫ್ಲುವೆನ್ಸರ್ ಮಾರ್ಕೆಟಿಂಗ್, ಡಿಜಿಟಲ್ ಮಾಧ್ಯಮ, ಡೇಟಾ ಹಾಗೂ ತಂತ್ರಜ್ಞಾನ ಆಧಾರಿತ ಮಾರ್ಕೆಟಿಂಗ್ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದರು. ಮಾರುತಿ ಸುಜುಕಿ, ಐಟಿಸಿ, ಆ್ಯಪಲ್, ಅದಾನಿ, ದುಬೈ ಟೂರಿಸಂ, ಎಸ್‌ಬಿಐ ಕಾರ್ಡ್ಸ್ ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳು ಯಾಪ್‌ನ ಗ್ರಾಹಕರಾಗಿದ್ದವು. ಭಾರತ, ಸಿಂಗಾಪುರ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸಂಸ್ಥೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತು. 2026ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಷೇರುಪೇಟೆಯಲ್ಲಿ ಆರಂಭಿಕ ಸಾರ್ವಜನಿಕ ಷೇರು ಮಾರಾಟದ ಮೂಲಕ ಪಟ್ಟಿಗೆ ಸೇರಿ, ಸ್ವತಂತ್ರ ಡಿಜಿಟಲ್ ಏಜೆನ್ಸಿ ನೆಟ್‌ವರ್ಕ್ ಆಗಿ ಈ ಸಾಧನೆ ಮಾಡಿದ ಭಾರತದ ಮೊದಲ ಸಂಸ್ಥೆಯಾಯಿತು. ಗೋಜೂಪ್ ಗ್ರೂಪ್ ಸ್ವಾಧೀನ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದ ಹೂಡಿಕೆಗಳು ಅವರ ದೂರದೃಷ್ಟಿಗೆ ಸಾಕ್ಷಿಯಾದವು.
ಸ್ನೀಕರ್ ಸಂಸ್ಕೃತಿ ಹಾಗೂ ಸಮಕಾಲೀನ ಕಲೆಯ ಮೇಲೂ ವಿಶೇಷ ಆಸಕ್ತಿ ಹೊಂದಿದ್ದ ಅತುಲ್ ಹೆಗ್ಡೆ, ನಿಧನಕ್ಕೆ ಎರಡು ವಾರಗಳ ಮೊದಲು ಲಿಂಕ್ಡ್‌ಇನ್‌ನಲ್ಲಿ, "ವ್ಯವಹಾರದಲ್ಲಿ ಕೆಲವು ವರ್ಷಗಳು ಕೇವಲ ಅಂಕಿಅಂಶಗಳನ್ನು ಬದಲಾಯಿಸುತ್ತವೆ. ಆದರೆ ಕೆಲವು ವರ್ಷಗಳು ನಿಮ್ಮ ಕಥೆಯನ್ನೇ ಬದಲಾಯಿಸುತ್ತವೆ. 2026ನೇ ಹಣಕಾಸು ವರ್ಷ ನಮಗೆ ಅಂಥದ್ದಾಗಿತ್ತು," ಎಂದು ಬರೆದು ತಮ್ಮ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ರಾಜ್ ನಾಯಕ್ ಅವರನ್ನು ತಮ್ಮ ಮಾರ್ಗದರ್ಶಕರಾಗಿ ಸದಾ ಗೌರವಿಸುತ್ತಿದ್ದರು.
ಮೂಡುಬಿದಿರೆಯ ಶ್ರೀನಗರ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, "ಅತುಲ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ಲಭಿಸಲಿ," ಎಂದು ಸಂತಾಪ ಸೂಚಿಸಿದ್ದಾರೆ.