ಮೂಡುಬಿದಿರೆ: ಬ್ಯಾಂಕ್ ಆಫ್ ಬರೋಡ ಪ್ರವರ್ತಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಹಾಗೂ ವೀಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಹೊಲಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ವೀಚೀಸ್ ಕೌಶಲ್ಯ ಕೇಂದ್ರದ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಕಾರ್ಯದರ್ಶಿ ಬಿ. ರಾಜೇಂದ್ರ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೊಲಿಗೆ ಕೌಶಲ್ಯವನ್ನು ಕಲಿತು ಸ್ವ ಉದ್ಯೋಗ ಆರಂಭಿಸಿದರೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಕುಟುಂಬದ ಖರ್ಚು-ವೆಚ್ಚಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಸ್ವ ಉದ್ಯೋಗಕ್ಕೆ ಕೌಶಲ್ಯ ತರಬೇತಿ ಅತ್ಯಗತ್ಯವಾಗಿದ್ದು, ಮಹಿಳೆಯರು ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಕೌಶಲ್ಯ ತರಬೇತಿಯು ಮಹಿಳೆಯರಲ್ಲಿ ಸ್ವ ಉದ್ಯೋಗ ಆರಂಭಿಸುವ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಲಭ್ಯವಿರುವ ಉದ್ಯೋಗಾವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜ್ಯೋತಿರಾಜ್, ಸ್ವ ಉದ್ಯೋಗ ಆರಂಭಿಸಲು ಬ್ಯಾಂಕ್‌ಗಳ ಮೂಲಕ ದೊರೆಯುವ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ವೀಚೀಸ್ ಕೌಶಲ್ಯ ಕೇಂದ್ರ ನಿರ್ದೇಶಕಿ ಶುಭ ಲಕ್ಷ್ಮೀ, ಸಂಪನ್ಮೂಲ ವ್ಯಕ್ತಿ ಅನಿತಾ ಆನಂದ್ ಉಪಸ್ಥಿತರಿದ್ದರು. ಪ್ರಿಯ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಮೂಡುಬಿದಿರೆ ವ್ಯಾಪ್ತಿಯ 30 ಮಹಿಳೆಯರು ಎರಡು ತಿಂಗಳ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.