ಮೂಡುಬಿದಿರೆ: ಕನ್ನಡ ಸಾಹಿತ್ಯದ ಸಂಗೀತ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಅಪರೂಪದ ಪ್ರಯೋಗವೇ ‘ಕನ್ನಡ ಗಾನಗುಚ್ಛ’ ಕಾರ್ಯಕ್ರಮ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜೀವನರಾಮ್ ಸುಳ್ಯ ಅವರ ಸಂಯೋಜನೆಯಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾದ ಎರಡು ಗಂಟೆಗಳ ‘ಕನ್ನಡ ಗಾನಗುಚ್ಛ’ ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದರು. ಹಾಡಿನ ಅಪಾರ ಶಕ್ತಿಯನ್ನು ಕಲಾವಿದರು ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದು, ಸ್ವರದ ಏರಿಳಿತ, ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಹಾಗೂ ಕಲ್ಪನೆಯನ್ನು ಪ್ರೇಕ್ಷಕರ ಕಣ್ಮುಂದೆ ಜೀವಂತವಾಗಿ ಮೂಡಿಸಿದ ರೀತಿ ಅಭಿನಂದನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಒಟ್ಟು 28 ವೈವಿಧ್ಯಮಯ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಕಂದಪದ್ಯ, ರಂಗಗೀತೆ, ಜಾನಪದ ಗೀತೆ, ಮಕ್ಕಳ ಗೀತೆ, ಜೋಗುಳ, ವಚನ, ದಾಸರ ಪದ, ಭಜನೆ, ಕವ್ವಾಲಿ, ಗೀಗಿಪದ, ಕಂಸಾಳೆ ಪದ, ಸೋಲಿಗರ ಹಾಡು, ಮಂಟೇಶ್ವರ ಸ್ವಾಮಿಯ ಪದ್ಯ ಹಾಗೂ ತುಳು ಪಾಡ್ದನ ಸೇರಿದಂತೆ ಕನ್ನಡದ ವಿವಿಧ ಸಂಗೀತ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಯಿತು.