ಮೂಡುಬಿದಿರೆ: ಕರಾವಳಿ ಭಾಗದ ಮೀನು ಸಾಕಾಣೆದಾರರು ಮಾರುಕಟ್ಟೆ ಸಮಸ್ಯೆಯಿಂದ ಹೊರಬರಲು ಸಂಘಟಿತರಾಗಿ ನೇರ ಮಾರುಕಟ್ಟೆ ವ್ಯವಸ್ಥೆ ರೂಪಿಸಿ ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡಬೇಕು ಎಂದು ಬೆಂಗಳೂರಿನ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ವಿಜ್ಞಾನಿ ಡಾ. ಚೇತನ್ ಹೇಳಿದರು.

ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೀನುಗಾರಿಕಾ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಆಶ್ರಯದಲ್ಲಿ ಪಣಪಿಲದ ಶ್ರೀರಾಜ್ ಮತ್ಸ್ಯ ಫಾರ್ಮ್ನಲ್ಲಿ ಶನಿವಾರ ನಡೆದ ಐದನೇ ವರ್ಷದ ಮತ್ಸ್ಯಮೇಳ-2026ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮೀನುಗಳನ್ನು ತಳಿಗೆ ಅನುಗುಣವಾಗಿ ವೈಜ್ಞಾನಿಕ ವಿಧಾನದಲ್ಲಿ ಸಾಕಬೇಕು. ಸಣ್ಣ ಮಟ್ಟದ ಮೀನು ಸಾಕಾಣೆದಾರರು ರೈತ ಸಂತೆಗಳು ಅಥವಾ ಕೆಎಫ್‌ಡಿಸಿ ಮೂಲಕವೂ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀರಾಜ್ ಫಾರ್ಮ್ನ ಕೃಷ್ಣಮ್ಮ ಜೆ. ಕೋಟ್ಯಾನ್ ಮೇಳ ಉದ್ಘಾಟಿಸಿದರು. ದರೆಗುಡ್ಡೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಅಶೋಕ ಶೆಟ್ಟಿ, ಮಾಜಿ ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಮಾಜಿ ಸದಸ್ಯ ದೀಕ್ಷಿತ್ ಪಣಪಿಲ, ಪ್ರಮುಖರಾದ ದೇವರಾಜ ಕೋಟ್ಯಾನ್, ಹರಿಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು. ಮತ್ಸ್ಯಮೇಳದ ರೂವಾರಿ ರಾಜೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸರಿತಾ ವಂದಿಸಿದರು.

ಮೇಳದಲ್ಲಿ ಕಾಟ್ಲಾ, ರೋಹು, ಗ್ರಾಸ್ ಕಾರ್ಪ್, ಮಡೆಂಜಿ ಸೇರಿದಂತೆ ವಿವಿಧ ತಳಿಯ 1,500ಕ್ಕೂ ಅಧಿಕ ಮೀನುಗಳು ಹಾಗೂ 25 ಸಾವಿರಕ್ಕೂ ಅಧಿಕ ಮೀನು ಮರಿಗಳು ಮಾರಾಟವಾಗಿದ್ದು, ಮೀನು ಸಾಕಾಣೆದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.