ಮೂಡುಬಿದಿರೆ: ಪಣಪಿಲ ಕಾರ್ಯಕ್ಷೇತ್ರದ ಕಟೀಲೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಭಾನುವಾರ ನಡೆಯಿತು.
ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಹೇರಳ ಪ್ರಮಾಣದ ಪೌಷ್ಟಿಕಾಂಶ ಲಭ್ಯವಿರುವುದರಿಂದ ಇಂತಹ ಆಹಾರಗಳನ್ನು ದೈನಂದಿನ ಜೀವನದಲ್ಲಿ ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಜನಜಾಗೃತಿ ವೇದಿಕೆಯ ಸದಸ್ಯ ಮುನಿರಾಜ ಹೆಗ್ಡೆ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯಕರ ಜೀವನಶೈಲಿಗೆ ಪೌಷ್ಟಿಕ ಆಹಾರ ಅತ್ಯಗತ್ಯವಾಗಿದ್ದು, ಸ್ಥಳೀಯವಾಗಿ ದೊರೆಯುವ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕಿ ಪುಷ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಹೇಮಾವತಿ ಹೆಗ್ಗಡೆ ಅವರ ಆಶಯದಂತೆ ಪೌಷ್ಟಿಕ ಆಹಾರದ ಅರಿವು ಪ್ರತಿಯೊಂದು ಮನೆಯಲ್ಲೂ ಅನುಷ್ಠಾನಗೊಳ್ಳಬೇಕು ಎಂದು ಹೇಳಿದರು.
ಹಿರಿಯರಾದ ವಸಂತಿ ದಾಳಿಂಬೆ ಸಲಾಡ್ ತಯಾರಿಸುವ ವಿಧಾನ ಹಾಗೂ ಅದರ ಪೌಷ್ಟಿಕಾಂಶದ ಉಪಯೋಗಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಬಳಿಕ ಜ್ಞಾನವಿಕಾಸ ಕೇಂದ್ರದ ಸದಸ್ಯರು ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಿದರು. ಉತ್ತಮ ಆಹಾರ ತಯಾರಿಸಿದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.
ಪಣಪಿಲ ಬಿ. ಒಕ್ಕೂಟದ ಅಧ್ಯಕ್ಷ ಸುಕೇಶ್, ಮಾಜಿ ಅಧ್ಯಕ್ಷ ಜಯ, ಸೇವಾಪ್ರತಿನಿಧಿ ಲತಾ ಹಾಗೂ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನುತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.