ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಐತಿಹಾಸಿಕ 110ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ಆಯೋಜಿಸಿರುವ 'ಬೆದ್ರದ ಕೃಷ್ಣೋತ್ಸವ' ಕಾರ್ಯಕ್ರಮದ ಪೋಸ್ಟರ್‌ನ್ನು ಸೋಮವಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳು ಸುಗಮವಾಗಿ ನೆರವೇರಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ದೇವರಿಗೆ ಫಲಪುಷ್ಪ ಅರ್ಪಿಸಿ ಕೃಷ್ಣೋತ್ಸವದ ಪೋಸ್ಟರ್ ಅನಾವರಣಗೊಳಿಸಲಾಯಿತು.
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೆಸರ ಗುರುಪ್ರಸಾದ್ ಹೊಳ್ಳ, ಜವನೆರ್ ಬೆದ್ರ ಫೌಂಡೇಶನ್ ಸಂಸ್ಥಾಪಕ ಅಮರ್ ಕೋಟೆ, ಸಂಘಟನೆಯ ಸಂಚಾಲಕ ರಂಜಿತ್ ಶೆಟ್ಟಿ, ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸುನೀತ ಉದಯ್, ದಿನೇಶ್ ನಾಯ್ಕ್, ನಾರಾಯಣ ಪದುಮಲೆ ಹಾಗೂ ಇತರರು ಉಪಸ್ಥಿತರಿದ್ದರು.