ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ಬಂಗೂರಿ ಬಾಕಿಮಾರು ಗದ್ದೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್, ಸಾರ್ವಜನಿಕ ಗಣೇಶೋತ್ಸವ ಮಹಿಳಾ ಘಟಕ, ಜ್ಞಾನೋದಯ ಯುವಕ ಸಂಘದ ಆಶ್ರಯದಲ್ಲಿ 9ನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಭಾನುವಾರ ನಡೆಯಿತು.

ಜಿಲ್ಲಾ ಭಾರತೀಯ ಕಿಸಾನ್ ಸಂಘದ ಮುಖಂಡ , ವಕೀಲ ಶಾಂತಿಪ್ರಸಾದ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ತ್ಯಾಗದ ಸಂಕೇತವಾದ ಕೇಸರಿ ಉಡುಪು, ಸಮೃದ್ಧಿಯ ಸಂಕೇತವಾದ ಹಸಿರು ಪರಿಸರದ ನಡುವೆ ಸಾವಯವ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಯುವಕರು, ಹಿರಿಯರು ಒಗ್ಗೂಡಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ. ದಯಾನಂದ ಪೈ ಮಾತನಾಡಿ, ಮಣ್ಣಿನೊಂದಿಗೆ ಬದುಕುವ ವ್ಯಕ್ತಿ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾನೆ. ಒಗ್ಗಟ್ಟು, ಶಿಸ್ತು, ಪ್ರೋತ್ಸಾಹ, ಪರೋಪಕಾರ, ಸಹಭೋಜನ ಭಾರತೀಯ ಸಂಸ್ಕೃತಿಯ ಪ್ರಮುಖ ಲಕ್ಷಣಗಳಾಗಿವೆ ಎಂದರು.

ಕೃಷಿ ಕ್ಷೇತ್ರದಲ್ಲಿ ಜೀವಮಾನ ವಿಶೇಷ ಸಾಧನೆ ಮಾಡಿದ ಸಾವಯವ ಕೃಷಿಕ ಬಡಕೋಡಿ ರಾಘು ಪೂಜಾರಿ ಅವರನ್ನು ಗೌರವಿಸಲಾಯಿತು. ಪ್ರಗತಿಪರ ಕೃಷಿಕ ದಯಾನಂದ ಭಟ್ ಅಭಿನಂದನಾ ಭಾಷಣ ಮಾಡಿದರು.

ಉದ್ಯಮಿ ತಿಮ್ಮಯ್ಯ ಶೆಟ್ಟಿ, ಬನ್ನಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ ಬಲ್ಲಾಳ್ ಬ್ಲೋಸಮ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಸೈಮನ್ ಮಾಸ್ಕರೆನ್ನಸ್, ಜೈನ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ಯಾಮ್ ಪ್ರಸಾದ್ ಭಟ್, ಜ್ಯೋತಿಷಿ, ವಾಸ್ತು ತಜ್ಞ ಎಂ ರಾಘವೇಂದ್ರ ಭಂಡಾರ್ಕರ್ ,ಕ್ಷೇತ್ರ ಸಮನ್ವಯ ಅಧಿಕಾರಿ ಸೌಮ್ಯ ಎನ್, ಉದ್ಯಮಿ ಭರತ್ ಶೆಟ್ಟಿ ಅಂಬೂರಿ, ಗ್ರಾಪಂ ಮಾಜಿ ಸದಸ್ಯ ಸತೀಶ್ ಕರ್ಕೇರ, ನಿವೃತ್ತ ಅಂಚೆಪಾಲಕ ಜಗತ್ಪಾಲ ಜೈನ್, ಪಡುಮಾರ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯಿಷಾ ಚೌಟ, ಸುನಂದಾ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ ಅಳಿಯೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಭಟ್ ವಂದಿಸಿದರು. ಬಾಲಕ-ಬಾಲಕಿಯರು, ಯುವಕ-ಯುವತಿಯರು ಹಾಗೂ ಹಿರಿಯರಿಗಾಗಿ ಹಗ್ಗಜಗ್ಗಾಟ, ವಾಲಿಬಾಲ್, ಓಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.