ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಂಗಡಿಯ ಪೇರಿ ನಿವಾಸಿ ಕಿಶೋರ್ (31) ಅವರು ನಾಪತ್ತೆಯಾದ ಮೂರು ದಿನಗಳ ಬಳಿಕ ಪಲ್ಗುಣಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಜು. 10ರಂದು ಮನೆಯಿಂದ ಹೊರಗೆ ತೆರಳಿದ್ದ ಕಿಶೋರ್ ಬಳಿಕ ಮನೆಗೆ ಮರಳಿರಲಿಲ್ಲ. ಅವರು ನಿಗೂಢವಾಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಜು. 11ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬಳಿಕ ಮನೆಮಂದಿ ಹಾಗೂ ಗ್ರಾಮಸ್ಥರು ಮೂರು ದಿನಗಳಿಂದ ವಿವಿಧೆಡೆ ನಿರಂತರ ಹುಡುಕಾಟ ನಡೆಸುತ್ತಿದ್ದರು.

ಭಾನುವಾರ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಬೋಟ್‌ನ ಸಹಾಯದಿಂದ ಪಲ್ಗುಣಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದರು. ಈ ವೇಳೆ ನದಿಯಲ್ಲಿದ್ದ ಪೊದೆಯ ಅಡಿಯಲ್ಲಿ ಕಿಶೋರ್ ಅವರ ಮೃತದೇಹ ಪತ್ತೆಯಾಯಿತು.

ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆದಿದೆ. ಕಿಶೋರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.