ಮೂಡುಬಿದಿರೆ: ಮೈಸೂರು ಜಿಲ್ಲೆಯ ಬೆಳಕು ಸೇವಾ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ **'ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026'**ಗೆ ಮೂಡುಬಿದಿರೆಯ ಜಾನಪದ ಕಲಾವಿದ, ಶಿಕ್ಷಕ ಹಾಗೂ ಸಾಹಿತಿ ಮೋಹನ್ ಹೊಸ್ಮಾರ್ ಆಯ್ಕೆಯಾಗಿದ್ದಾರೆ.

ಕಲೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ನಿರಂತರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 19ರಂದು ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ನಡೆಯಲಿದೆ.

ಮೋಹನ್ ಹೊಸ್ಮಾರ್ ಹಲವು ವರ್ಷಗಳಿಂದ ಜಾನಪದ ಕಲೆಯ ಸಂರಕ್ಷಣೆ ಮತ್ತು ಪೋಷಣೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಅವರು, ಕರ್ನಾಟಕದ ಶ್ರೀಮಂತ ಜಾನಪದ ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ.

ವಿದ್ಯಾರ್ಥಿಗಳು ಮತ್ತು ಯುವಜನಾಂಗಕ್ಕಾಗಿ ಜಾನಪದ ತರಗತಿಗಳು, ಕಾರ್ಯಾಗಾರಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದು, ತುಳು ಮತ್ತು ಕನ್ನಡ ಜಾನಪದ ಹಾಡುಗಳು, ಸಂದಿ, ಪಾರ್ದನ ಹಾಗೂ ಜಾನಪದ ಕ್ರೀಡೆಗಳನ್ನು ಪರಿಚಯಿಸುವ ಮೂಲಕ ಪರಂಪರೆಯ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೋಹನ್ ಹೊಸ್ಮಾರ್, ಶ್ರೀ ಶಾರದಾ ನಾಟ್ಯಾಲಯ, ಮೂಡುಬಿದಿರೆ ಕಲಾಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ತಂಡದೊಂದಿಗೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿಯೂ ಜಾನಪದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಕಳೆದ ಎಂಟು ವರ್ಷಗಳಿಂದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.