ಮೂಡುಬಿದಿರೆ: ಶಾಲಾ ಶಿಕ್ಷಣವು ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಕಲೆ, ಸಾಹಿತ್ಯ, ಕ್ರೀಡೆ, ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿದಾಗ ಮಾತ್ರ ವಿದ್ಯಾರ್ಥಿಯ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ಜೈನ ಪ್ರೌಢಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಣ ಚಿಂತಕ ಮುನಿರಾಜ ರೆಂಜಾಳ ಹೇಳಿದರು.
ಪುತ್ತಿಗೆಯ ವಿವೇಕಾನಂದನಗರದಲ್ಲಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ನಡೆದ 2026–27ನೇ ಸಾಲಿನ ನೂತನ ಶಾಲಾ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುನಿರಾಜ ರೆಂಜಾಳ ಅವರನ್ನು ಸನ್ಮಾನಿಸಲಾಯಿತು.
ಡಾ. ಆಳ್ವ ಅವರ ದೂರದೃಷ್ಟಿಯ ಶಿಕ್ಷಣ ಪರಿಕಲ್ಪನೆಯಿಂದ ಶಾಲೆಯು ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡಿದೆ. ಶಿಕ್ಷಣದ ನಿಜವಾದ ಉದ್ದೇಶ ಉತ್ತಮ ಅಂಕಗಳನ್ನು ಗಳಿಸುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದಾಗಿದೆ ಎಂದು ಹೇಳಿದರು.
ಆಡಳಿತ ಅಧಿಕಾರಿ ಪ್ರೀತಮ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಗುರುಪ್ರಸಾದ್, ರಾಜೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಸಿಂಚನಾ ಹಿರೇಮಠ ಸ್ವಾಗತಿಸಿ, ಸಿದ್ದಾರೂಡ ವಂದಿಸಿದರು.