ಮೂಡುಬಿದಿರೆ: ರಾಷ್ಟ್ರೀಯ ಯಾಂತ್ರಿಕೃತ ಸ್ವಚ್ಛತಾ ಪರಿಸರ ವ್ಯವಸ್ಥೆ (ನಮಸ್ತೆ) ಯೋಜನೆಯಡಿ ಸ್ವಚ್ಛತಾ ಕಾರ್ಮಿಕರ ಸುರಕ್ಷತೆ, ಗೌರವ, ಕಲ್ಯಾಣವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ನಮಸ್ತೆ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಇಂದು ಎಂ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಅಭಿಯಂತರೆ ಶಿಲ್ಪಾ ಎಸ್. ಪ್ರಸ್ತಾವನೆಗೈದು, ಯೋಜನೆಯಡಿ ಒಳಚರಂಡಿ, ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು, ತ್ಯಾಜ್ಯ ಸಂಗ್ರಾಹಕರು, ಡ್ರೈನ್ ಕ್ಲೀನರ್‌ಗಳಿಗೆ ಪಿಪಿಇ ಕಿಟ್ ವಿತರಣೆ, ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ, ಸುರಕ್ಷತಾ, ಕೌಶಲ್ಯ ಅಭಿವೃದ್ಧಿ ತರಬೇತಿ, ಸ್ವಯಂ ಉದ್ಯೋಗ ಸೌಲಭ್ಯ, ಸ್ವಚ್ಛತಾ ವಾಹನಗಳ ಖರೀದಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಎಸ್‌ಡಬ್ಲ್ಯು ವಿಭಾಗದ 8 ಫಲಾನುಭವಿಗಳ ಪ್ರೊಫೈಲಿಂಗ್ ಪೂರ್ಣಗೊಂಡಿದ್ದು, ಈಗಾಗಲೇ ಪಿಪಿಇ ಕಿಟ್, ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಿಸಲಾಗಿದೆ. 68 ಮಂದಿ ತ್ಯಾಜ್ಯ ಸಂಗ್ರಾಹಕರ ಪ್ರೊಫೈಲಿಂಗ್ ಪೂರ್ಣಗೊಂಡಿದ್ದು, ಅವರಲ್ಲಿ 18 ಮಂದಿಗೆ ಪಿಪಿಇ ಕಿಟ್ ವಿತರಿಸಲಾಗಿದೆ. 9 ಮಂದಿಗೆ ಆಯುಷ್ಮಾನ್ ಕಾರ್ಡ್ ಸಿದ್ಧಗೊಂಡಿದ್ದು, ನಾಲ್ವರಿಗೆ ಕಾರ್ಡ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರ ಪುನರ್ವಸತಿ ಕಾರ್ಯಕರ್ತೆ ಸವಿತಾ ನಶಾ ಮುಕ್ತ ಭಾರತ ಕುರಿತ ಪ್ರಮಾಣವಚನ ಬೋಧಿಸಿದರು.

ಹಸಿರುದಳ ಸರ್ಕಾರೇತರ ಸಂಸ್ಥೆಯ ಲಕ್ಷ್ಮೀಕಾಂತ್ ಪಿಪಿಇ ಕಿಟ್‌ಗಳನ್ನು ಬಳಸುವ ವಿಧಾನ, ಧರಿಸುವುದರ ಮಹತ್ವ, ಸುರಕ್ಷತಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಹಸಿರುದಳ ಪ್ರತಿನಿಧಿ ಶಾಂತಪ್ಪ ಕಾರ್ಮಿಕರ ಸುರಕ್ಷತೆ ಕುರಿತು ಮಾತನಾಡಿದರು.

ಕಂದಾಯ ಅಧಿಕಾರಿ ಜ್ಯೋತಿ ಎಚ್. ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ ನಿರೂಪಿಸಿದರು. ಕಮ್ಯೂನಿಟಿ ಮೊಬಿಲೈಸರ್ ಚಂದ್ರಿಕಾ ವಂದಿಸಿದರು.

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು, ತ್ಯಾಜ್ಯ ಸಂಗ್ರಾಹಕರು, ಡ್ರೈನ್ ಕ್ಲೀನರ್‌ಗಳ ಹಾಜರಾತಿ, ನೋಂದಣಿ ನಡೆಸಲಾಯಿತು. ತ್ಯಾಜ್ಯ ಸಂಗ್ರಾಹಕರಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಕಮ್ಯುನಿಟಿ ಮೊಬಿಲೈಸರ್ಸ್, ಹಸಿರು ದಳ ಸರ್ಕಾರೇತರ ಸಂಸ್ಥೆಯ ಲಕ್ಷ್ಮೀಕಾಂತ್ ನೆರವೇರಿಸಿದರು. ಬಳಿಕ ಭಾರತ ಸರ್ಕಾರ ಆಯೋಜಿಸಿದ್ದ ನಮಸ್ತೆ ಯೋಜನೆಯ ರಾಷ್ಟ್ರೀಯ ವೆಬ್‌ಕಾಸ್ಟ್ ಕಾರ್ಯಕ್ರಮ ವೀಕ್ಷಿಸಲಾಯಿತು.ಭಾಗವಹಿಸಿದ ಎಲ್ಲಾ ಫಲಾನುಭವಿಗಳ ನಶಾ ಮುಕ್ತ ಭಾರತ ಪ್ರಮಾಣವಚನದ ಪ್ರಮಾಣ ಪತ್ರವನ್ನು ಆನ್ಲೈನ್ ಮುಖಾಂತರ ಸ್ಥಳದಲ್ಲಿಯೇ ಸಿದ್ಧಪಡಿಸಲಾಯಿತು.