ಮೂಡುಬಿದಿರೆ: ಪ್ರತಿಯೊಬ್ಬ ಮನುಷ್ಯನು ಅಪಾರ ಸಾಧ್ಯತೆಗಳೊಂದಿಗೆ ಜನಿಸುತ್ತಾನೆ. ಆ ಸಾಧ್ಯತೆಗಳಿಗೆ ಸೂಕ್ತ ಅವಕಾಶ ಮತ್ತು ಸಮಾನತೆ ದೊರೆತಾಗ ವ್ಯಕ್ತಿ ಮಾತ್ರವಲ್ಲ, ಸಮಾಜವೂ ಅಭಿವೃದ್ಧಿಯಾಗುತ್ತದೆ. ಮಹಿಳೆಯರ ಸಬಲೀಕರಣವು ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಪ್ರಗತಿಗೆ ಪ್ರಮುಖ ಅಡಿಪಾಯವಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಣಮ್ಯ ಭಟ್ ಹೇಳಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ದೂರು ನಿರ್ವಹಣಾ ಸಮಿತಿಯ 2026-27ನೇ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಹಾಗೂ ನಾಯಕತ್ವದ ಅವಕಾಶಗಳು ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ನೈಜ ಸಮಾನತೆ ಸಾಧಿಸಲು ಸಮಾಜದ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯವಿದೆ ಎಂದು ತಿಳಿಸಿದರು.
ಪುರುಷರು ಮತ್ತು ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಭಿನ್ನರಾಗಿದ್ದರೂ ಹಕ್ಕುಗಳು, ಅವಕಾಶಗಳು ಮತ್ತು ಗೌರವದ ವಿಷಯದಲ್ಲಿ ಯಾವುದೇ ತಾರತಮ್ಯ ಇರಬಾರದು. ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ಮುಂದಿನ ಪೀಳಿಗೆಯಲ್ಲಿ ಸಮಾನತೆ, ಪರಸ್ಪರ ಗೌರವ ಹಾಗೂ ಜವಾಬ್ದಾರಿಯ ಮೌಲ್ಯಗಳನ್ನು ಶಿಕ್ಷಣದ ಮೂಲಕವೇ ಬೆಳೆಸಬೇಕಾಗಿದೆ. ಮಹಿಳೆಯರು ಆತ್ಮವಿಶ್ವಾಸದಿಂದ ಶಿಕ್ಷಣ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಮುನ್ನಡೆಯುವ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರ ಸಬಲೀಕರಣವು ಕೇವಲ ಮಹಿಳೆಯರ ಬೆಳವಣಿಗೆಗೆ ಸೀಮಿತವಲ್ಲ, ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ, ಶಿಕ್ಷಣ, ವಿಜ್ಞಾನ, ಕ್ರೀಡೆ, ಆಡಳಿತ ಹಾಗೂ ಉದ್ಯಮ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆ ಗಮನಾರ್ಹವಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆ, ಆತ್ಮವಿಶ್ವಾಸ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಕಾಲೇಜಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಅವು ವಿದ್ಯಾರ್ಥಿನಿಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಾಗೂ ಸೂಕ್ತ ಪರಿಹಾರ ಪಡೆಯಲು ನೆರವಾಗುತ್ತಿವೆ ಎಂದು ಹೇಳಿದರು.
ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಮಹಿಳಾ ಕ್ಷೇಮಪಾಲನಾ ಸಮಿತಿಯ ಸಂಯೋಜಕಿ ರಮ್ಯಾ ಶೆಟ್ಟಿ ಹಾಗೂ ಆಂತರಿಕ ದೂರು ನಿರ್ವಹಣಾ ಸಮಿತಿಯ ಸಂಯೋಜಕಿ ಸುಲತಾ ವಿದ್ಯಾಧರ್ ಉಪಸ್ಥಿತರಿದ್ದರು. ರಮ್ಯಾ ಶೆಟ್ಟಿ ಸ್ವಾಗತಿಸಿದರು. ಅನನ್ಯ ಅತಿಥಿಯನ್ನು ಪರಿಚಯಿಸಿದರು. ಸೃಜನ್ಯ ವಂದಿಸಿದರು. ಲಿಖಿತಾ ಕಾರ್ಯಕ್ರಮ ನಿರೂಪಿಸಿದರು.