ಮೂಡುಬಿದಿರೆ: ಪ್ರಕೃತಿಯನ್ನು ಪೂಜಿಸುವುದು ದೇವರನ್ನು ಪೂಜಿಸಿದಷ್ಟೇ ಪವಿತ್ರ ಎಂಬ ಭಾರತೀಯ ಜೀವನದರ್ಶನವನ್ನು ಸಾರುವ ಉದ್ದೇಶದಿಂದ ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪ್ರಕೃತಿ ಪ್ರೇಮಿ ರಸಿಕ ಅವರ ಸ್ಮರಣಾರ್ಥ ಹಮ್ಮಿಕೊಂಡಿರುವ 'ಸಸ್ಯ ಶ್ಯಾಮಲಾ–2026' ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಹಸಿರು ಅಭಿಯಾನದ ಮೂರನೇ ಕಾರ್ಯಕ್ರಮ ಮರಿಯಾಡಿಯ ನಡ್ಯೋಡಿ ದೈವಸ್ಥಾನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಹಿಸಿದರು. 'ಹಸಿರೇ ಉಸಿರಾಗಲಿ, ನೆನಪೇ ಬೆಳಕಾಗಲಿ' ಎಂಬ ಧ್ಯೇಯದೊಂದಿಗೆ ಅಭಿಯಾನ ರೂಪಿಸಲಾಗಿದೆ. ಒಂದು ಗಿಡ ನೆಡುವುದು ಕೇವಲ ಪರಿಸರ ಸಂರಕ್ಷಣೆಯ ಕಾರ್ಯವಲ್ಲ; ಮುಂದಿನ ಪೀಳಿಗೆಗೆ ಜೀವದ ಭರವಸೆಯನ್ನು ಬಿತ್ತುವ ಪುಣ್ಯಯಜ್ಞವಾಗಿದೆ. ಇಂದು ನೆಡುವ ಸಸಿ ನಾಳೆಯ ಸಮಾಜಕ್ಕೆ ನೆರಳಾಗಿ, ಫಲವಾಗಿ ಮತ್ತು ಜೀವದ ಉಸಿರಾಗಿ ಬೆಳೆಯಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಡ್ಯೋಡಿ ದೈವಸ್ಥಾನದ ಕಾರ್ಯದರ್ಶಿ, ಪತ್ರಕರ್ತ ಪ್ರಸನ್ನ ಹೆಗ್ಡೆ ಮಾತನಾಡಿ, ಕಾಲೇಜುಗಳು ಕೇವಲ ಪಠ್ಯಪುಸ್ತಕಗಳ ಜ್ಞಾನವನ್ನು ನೀಡುವ ಕೇಂದ್ರಗಳಾಗಿರದೆ, ಪ್ರಕೃತಿಯ ಬಗ್ಗೆ ಜವಾಬ್ದಾರಿಯ ಅರಿವು ಮೂಡಿಸುವ ಸಂಸ್ಕಾರ ಕೇಂದ್ರಗಳಾಗಬೇಕು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆ 'ಸಸ್ಯ ಶ್ಯಾಮಲಾ' ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯ. ಶಿಕ್ಷಣದೊಂದಿಗೆ ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ಬೆಸೆಯುತ್ತಿರುವ ಈ ಹಸಿರು ಪ್ರಯತ್ನ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ವೇದಮೂರ್ತಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣರು ಸಂಕ್ರಮಣದ ಸೇವಾಕರ್ತ ತೆಂಕಬೆಟ್ಟುಗುತ್ತು ರಮೇಶ್ ರೈ ಅವರಿಗೆ ಪ್ರಥಮ ಸಸಿಯನ್ನು ವಿತರಿಸಿದರು. ದೈವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ವಿಶ್ವನಾಥ ಕೋಟ್ಯಾನ್ ಮತ್ತು ಉಮೇಶ್ ಹೆಗ್ಡೆ, ಮಾಜಿ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಮಾಜಿ ಅಧ್ಯಕ್ಷರಾದ ದಿಲೀಪ್ ಕುಮಾರ್ ಶೆಟ್ಟಿ, ತೆಂಕಬೆಟ್ಟುಗುತ್ತು ಪ್ರದೀಪ್ ರೈ, ಉಮೇಶ್ ಕೋಟ್ಯಾನ್, ಉದ್ಯಮಿ ಆರ್. ಕೆ. ಭಟ್ ಉಪಸ್ಥಿತರಿದ್ದರು.

ಸಂಸ್ಥೆಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಉಪನ್ಯಾಸಕ ಡಾ. ವಾದಿರಾಜ ಕಲ್ಲುರಾಯ, ಎನ್.ಎಸ್.ಎಸ್. ಅಧಿಕಾರಿ ಅಶೋಕ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.