ಮೂಡುಬಿದಿರೆ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಹಿಂದಿನ ಕಾರ್ಪೊರೇಷನ್ ಬ್ಯಾಂಕ್, ಮೂಡುಬಿದಿರೆ ಶಾಖೆ) ಪರವಾಗಿ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆರೋಪಿಯಾಗಿದ್ದ ಸಂತೋಷ್ ಕುಮಾರ್ ಅವರನ್ನು ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ, 1881ರ ಕಲಂ 138ರಡಿ ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ.

ಕಾರ್ಪೊರೇಷನ್ ಬ್ಯಾಂಕ್, ಮೂಡುಬಿದಿರೆ ಶಾಖೆ (ಪ್ರಸ್ತುತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ದಾಖಲಿಸಿದ್ದ ಸಿ.ಸಿ. ನಂ. 685/2017 ಪ್ರಕರಣದಲ್ಲಿ, ಸಂತೋಷ್ ಕುಮಾರ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿತು. ವಿಚಾರಣೆಯ ಬಳಿಕ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಫವಾಜ್ ಪಿ. ಎ. ಆರೋಪಿಯನ್ನು ದೋಷಿ ಎಂದು ಘೋಷಿಸಿ ತೀರ್ಪು ಪ್ರಕಟಿಸಿದರು.

ತೀರ್ಪಿನಂತೆ, ಸಂತೋಷ್ ಕುಮಾರ್ ರೂ.4.60 ಲಕ್ಷ ಮೊತ್ತವನ್ನು ದೂರು ಸಲ್ಲಿಸಿದ ದಿನಾಂಕದಿಂದ ಹಣ ವಸೂಲಿಯಾಗುವವರೆಗೆ ವಾರ್ಷಿಕ ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕು. ಜೊತೆಗೆ, ರಾಜ್ಯ ವೆಚ್ಚವಾಗಿ ರೂ.3 ಸಾವಿರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

ದಂಡದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಆರೋಪಿಯ ಜಾಮೀನು ಹಾಗೂ ಶ್ಯೂರಿಟಿ ಬಾಂಡ್‌ಗಳನ್ನು ರದ್ದುಗೊಳಿಸಲಾಗಿದೆ. ಬ್ಯಾಂಕ್ ಪರವಾಗಿ ನ್ಯಾಯವಾದಿ ಹಾಗೂ ನೋಟರಿ ಶ್ವೇತಾ ಜೈನ್ ವಾದ ಮಂಡಿಸಿದರು.