ಮೂಡುಬಿದಿರೆ: ಈಶಸೇವೆ, ದೇಶಸೇವೆ, ಜನಸೇವೆ ಹಾಗೂ ಕಲಾಸೇವೆಯೆಂಬ ಚತುರ್ವಿಧ ಸೇವೆಯ ಪುಣ್ಯಭೂಮಿ ಭಾರತವಾಗಿದ್ದು, ದೇವರ ಸೇವೆ ಮತ್ತು ಪರರ ಸೇವೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯೇ ನಿಜವಾದ ಸುಖವನ್ನು ಅನುಭವಿಸುತ್ತಾನೆ ಎಂದು ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್‌ನ ಧರ್ಮಗುರು ವಿನ್ಸೆಂಟ್ ಡಿಸೋಜ ಹೇಳಿದರು.
ಮೂಡುಬಿದಿರೆಯ ಕೀರ್ತಿ ನಗರದ ಲಯನ್ಸ್ ಹರಿಭವ ಸಭಾಭವನದಲ್ಲಿ ಜುಲೈ 15ರಂದು ನಡೆದ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಅವರು, ಸಂಪತ್ತು ಮತ್ತು ಸಂಪಾದನೆ ಶಾಶ್ವತ ಸಮಾಧಾನವನ್ನು ನೀಡುವುದಿಲ್ಲ. ದೇವರಿಗೆ ಪ್ರಿಯವಾಗಿರುವ ಸೇವೆಯಲ್ಲಿ ಮಾತ್ರ ನಿಜವಾದ ಶಾಂತಿ ಮತ್ತು ಸಮಾಧಾನ ದೊರೆಯುತ್ತದೆ. ಇಂತಹ ಸೇವೆಗೆ ದೇವರ ಆಶೀರ್ವಾದ ಪ್ರತಿಫಲವಾಗಿ ಲಭಿಸುತ್ತದೆ ಎಂದು ಹೇಳಿದರು.
ಪದಗ್ರಹಣ ನೆರವೇರಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಜಿಎಲ್‌ಟಿ ಸಂಯೋಜಕ ಓಸ್ವಾಲ್ಡ್ ಡಿಸೋಜ, ಒಂದು ಸಂಸ್ಥೆ 50 ವರ್ಷಗಳ ಸೇವಾ ಪಯಣವನ್ನು ಪೂರ್ಣಗೊಳಿಸುವುದು ಸಾಮಾನ್ಯ ಸಾಧನೆಯಲ್ಲ. ಸೇವೆಯ ಸುದೀರ್ಘ ಪರಂಪರೆಯನ್ನು ನಿರ್ಮಿಸಿರುವ ಮೂಡುಬಿದಿರೆ ಲಯನ್ಸ್ ಕ್ಲಬ್‌ನ ಎಲ್ಲ ಸದಸ್ಯರು ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ನಿರ್ಗಮನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾತನಾಡಿ, ತಮ್ಮ ಅಧ್ಯಕ್ಷತೆಯಲ್ಲಿನ ಸುವರ್ಣ ವರ್ಷವನ್ನು ಸ್ಮರಣೀಯವಾಗಿಸಲು ಹರಿಭವ ಸಭಾಭವನ ನಿರ್ಮಾಣವನ್ನು ಏಕೈಕ ಕಾರ್ಯಸೂಚಿಯಾಗಿ ಪೂರ್ಣಗೊಳಿಸಲು ಸಹಕರಿಸಿದ ಕ್ಲಬ್‌ನ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ರಿಚರ್ಡ್ ಕರ್ಡೋಜ, ತಮ್ಮ ಅವಧಿಯಲ್ಲಿ ಕೈಗೊಳ್ಳಲಿರುವ ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು.
ಲಯನ್ಸ್ ಜಿಲ್ಲಾ ಉಪ ರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಮಾಜಿ ರಾಜ್ಯಪಾಲ ಮೆಲ್ವಿನ್ ಡಿಸೋಜ, ಪ್ರಾಂತೀಯ ಅಧ್ಯಕ್ಷ ಎಂ.ಕೆ. ದಿನೇಶ್, ವಲಯಾಧ್ಯಕ್ಷ ದೇವುದಾಸ ಹಿಬರೋಡಿ, ಲಿಯೋ ನೂತನ ಅಧ್ಯಕ್ಷೆ ಶಿವಾನಿ ಹಾಗೂ ನಿರ್ಗಮನ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ ಮಾತನಾಡಿದರು. ಸೇವಾ ಕಾರ್ಯಕ್ರಮದ ಅಂಗವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹೋಲಿರೋಸರಿಯ ಸಮೀಕ್ಷಾ, ಬಿ.ಆರ್.ಪಿ.ಯ ಸುಧೇಶ್, ಪ್ರಾಂತ್ಯದ ಶ್ರೇಯಾ ಹಾಗೂ ಜೈನ ಪ್ರೌಢಶಾಲೆಯ ಸಿಂಧೂರ ಅವರಿಗೆ ನಗದು ಪುರಸ್ಕಾರ ವಿತರಿಸಲಾಯಿತು.
ಶಿವಪ್ರಸಾದ್ ಹೆಗ್ಡೆ ಪ್ರಾಯೋಜಕತ್ವದಲ್ಲಿ ಪುಟಾಣಿ ಲಿಖಿತಾ ಹಾಗೂ ಬಿಎಸ್‌ಸಿ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಧನಸಹಾಯ, ರತ್ನಾಕರ ಎಂ. ಹೆಗ್ಡೆಯವರ ಪ್ರಾಯೋಜಕತ್ವದಲ್ಲಿ ಶ್ರಾವ್ಯಳ ಶಿಕ್ಷಣಕ್ಕೆ ಮತ್ತು ಡಾಕಯ್ಯ ಅವರ ಮನೆ ನಿರ್ಮಾಣಕ್ಕೆ ಸಹಾಯಧನ, ವಿನೋದ್ ಡೇಸಾ ಪ್ರಾಯೋಜಕತ್ವದಲ್ಲಿ ಒಂಟಿಕಟ್ಟೆ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಜೊಸ್ಸಿ ಮಿನೇಜಸ್ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ಸಿಯೋನ್ ಆಶ್ರಮಕ್ಕೆ ಸಹಾಯಧನ ವಿತರಿಸಲಾಯಿತು. ಮೂಡುಬಿದಿರೆಯ ವಿವಿಧ ಶಾಲೆಗಳಿಗೆ 1.50 ಲಕ್ಷ ರೂ. ವೆಚ್ಚದಲ್ಲಿ ಉಚಿತ ಪುಸ್ತಕ ವಿತರಣೆ ಮಾಡಿದ ಕೆ. ಶ್ರೀಪತಿ ಭಟ್ ಅವರನ್ನು ಅಭಿನಂದಿಸಲಾಯಿತು.
ಪ್ರಮೀಳಾ ಕರ್ಡೋಜ, ಶಿವಪ್ರಸಾದ್, ಓಸ್ವಾಲ್ಡ್ ಡಿಕೋಸ್ತ, ಹರೀಶ್ ತಂತ್ರಿ, ಹರ್ಷ, ಅರುಣ್ ಡಿಸಿಲ್ವ, ಜೆಸಿಂತಾ ಡಿಮೆಲ್ಲೋ, ಸ್ವಯಂ ಎಸ್. ಪೂಜಾರಿ, ಶಶಾಂಕ್, ರಾಹುಲ್ ಹೆಗ್ಡೆ ಹಾಗೂ ವ್ಯಾಲೆನ್ಸ್ ಮೆಂಡೋನ್ಸಾ ಉಪಸ್ಥಿತರಿದ್ದರು.
ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ನವಾನಂದ ಧ್ವಜವಂದನೆ ನೆರವೇರಿಸಿದರು. ಹಿಮಾಂಶಿ ಪ್ರಾರ್ಥಿಸಿದರು. ರೊನಾಲ್ಡ್ ಸೆರಾವೊ ನೀತಿ ಸಂಹಿತೆ ಪಠಿಸಿದರು. ಓಸ್ವಾಲ್ಡ್ ಡಿಕೋಸ್ತ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ವಲೇರಿಯನ್ ಸಿಕ್ವೇರಾ ಹಾಗೂ ಸ್ವಯಂ ಎಸ್. ಪೂಜಾರಿ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಆಂಡ್ರ್ಯೂ ಡಿಸೋಜ, ಆಲ್ವಿನ್ ಮಿನೇಜಸ್ ಹಾಗೂ ಹರೀಶ್ ತಂತ್ರಿ ನೂತನ ಸದಸ್ಯರನ್ನು ಪರಿಚಯಿಸಿದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು. ಹರ್ಷ ವಂದಿಸಿದರು.