ಮೂಡುಬಿದಿರೆ: ಪ್ರಕೃತಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡುಬಿದಿರೆ ವತಿಯಿಂದ ಪರಿಸರ ಪ್ರೇಮಿ ರಸಿಕಾ ಜೈನ್ ಅವರ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಸಸ್ಯ ಶ್ಯಾಮಲಾ–2026’ ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಅಭಿಯಾನದ ನಾಲ್ಕನೇ ಕಾರ್ಯಕ್ರಮ ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ರಮೇಶಚಂದ್ರ ಪಿ., ದೇವಾಲಯಗಳು ಭಕ್ತಿಯ ಕೇಂದ್ರಗಳಷ್ಟೇ ಅಲ್ಲದೆ ಪ್ರಕೃತಿ ಸಂರಕ್ಷಣೆಯ ಸಂಕಲ್ಪ ಮೂಡುವ ಪುಣ್ಯಭೂಮಿಗಳಾಗಬೇಕು ಎಂದು ಹೇಳಿದರು. ಮರ ನೆಡುವುದು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆಯ ನಮನವಾಗಿದ್ದು, ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿಸುವ ನಿಟ್ಟಿನಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕೈಗೊಂಡಿರುವ ‘ಸಸ್ಯ ಶ್ಯಾಮಲಾ’ ಅಭಿಯಾನ ಸಮಾಜಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪಾಲನೆ ಮಾಡುವ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಸಸಿಗಳನ್ನು ವಿತರಿಸಿ ಮಾತನಾಡಿ, ಸಂಸ್ಥೆಯ ಮಹತ್ವಾಕಾಂಕ್ಷಿ ‘ಸಸ್ಯ ಶ್ಯಾಮಲಾ’ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಈ ಅಭಿಯಾನವನ್ನು ಜನಾಂದೋಲನವಾಗಿ ರೂಪಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಾರ್ವಜನಿಕರಿಗೆ ವಿವಿಧ ಜಾತಿಯ ಫಲ ಹಾಗೂ ನೆರಳು ನೀಡುವ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಮಹಾಮಾಯಿ ದೇವಸ್ಥಾನದ ಅಧ್ಯಕ್ಷ ಸುಂದರ ಶೆಟ್ಟಿ, ಕಾರ್ಯದರ್ಶಿ ಕಮಲಾಕ್ಷ ರಾವ್, ಕೋಶಾಧಿಕಾರಿ ರಮೇಶಚಂದ್ರ ಪಿ., ಟ್ರಸ್ಟಿಗಳಾದ ರಾಮಚಂದ್ರ, ಪದ್ಮಯ್ಯ ಬಿ. ಸುವರ್ಣ, ದಿನೇಶ್ ರಾವ್, ಗೋಪಾಲ ಕೋಟ್ಯಾನ್, ಸೂರ್ಯ ಭಟ್, ಶಿವಾನಂದ ಪೈ ಹಾಗೂ ದೇವಸ್ಥಾನದ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಅಭಿಯಾನದ ಅಂಗವಾಗಿ ಮಾವು, ಬೇವು, ಪೇರಳೆ, ನೇರಳೆ ಸೇರಿದಂತೆ ಸುಮಾರು ಐವತ್ತು ಬಗೆಯ ಫಲ ಹಾಗೂ ನೆರಳು ನೀಡುವ ಸಸ್ಯಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು. ಪರಿಸರ ಸಂರಕ್ಷಣೆಯ ಮಹತ್ವ ಸಾರಿದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಉಪನ್ಯಾಸಕ ವಾದಿರಾಜ ಕಲ್ಲೂರಾಯ, ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವರೂಪ್ ಜೈನ್, ಶಿಕ್ಷಕಿ ರಂಜಿತ, ಸಂಸ್ಥೆಯ ಸಿಬ್ಬಂದಿ, ಪರಿಸರಾಸಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.