ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ‘ಸಂಪನ್ನಮ್’ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ, ವಿಶಾಲ ಮನೋಭಾವ ಮತ್ತು ಸಮಗ್ರ ವೈದ್ಯಕೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಯುರ್ವೇದ ವೈದ್ಯಕೀಯ ಪದ್ಧತಿ ಇಂದು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಸುಮಾರು 17 ರಾಷ್ಟ್ರಗಳಿಗೆ ಇದರ ವಿಸ್ತರಣೆ ಆಗಿದ್ದು, 25ಕ್ಕೂ ಹೆಚ್ಚು ಯುರೋಪಿನ ರಾಷ್ಟ್ರಗಳಲ್ಲಿ ಆಯುರ್ವೇದಕ್ಕೆ ಮಾನ್ಯತೆ ದೊರೆತಿರುವುದು ಈ ವೈದ್ಯ ಪದ್ಧತಿಯ ಬೆಳವಣಿಗೆಯ ಸೂಚಕವಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಆಯುಷ್ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹3,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರತ್ಯೇಕ ಆಯುಷ್ ಸಚಿವಾಲಯ ಹಾಗೂ ಸಚಿವರ ವ್ಯವಸ್ಥೆ ಕಲ್ಪಿಸಿರುವುದು ಈ ಕ್ಷೇತ್ರಕ್ಕೆ ನೀಡುತ್ತಿರುವ ಮಹತ್ವವನ್ನು ತೋರಿಸುತ್ತದೆ ಎಂದರು.

ಆಯುರ್ವೇದದಲ್ಲಿ ಔಷಧ, ಚಿಕಿತ್ಸಾ ವಿಧಾನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ವೈದ್ಯರು ನಿರಂತರವಾಗಿ ಹೊಸ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ಅಲೋಪಥಿ, ದಂತ ವೈದ್ಯಕೀಯ, ಫಿಸಿಯೋಥೆರಪಿ, ಪ್ರಕೃತಿ ಚಿಕಿತ್ಸೆ ಹಾಗೂ ಹೋಮಿಯೋಪಥಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ಧತಿಗಳ ಬೆಳವಣಿಗೆಯ ಬಗ್ಗೆ ಅರಿವು ಹೊಂದುವುದು ವೈದ್ಯರಿಗೆ ಹೆಚ್ಚುವರಿ ಸಾಮರ್ಥ್ಯ ನೀಡುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಕೊಡು-ಕೊಳ್ಳುವ ಮನೋಭಾವ ಅಗತ್ಯವಾಗಿದೆ. ಪರಸ್ಪರ ಜ್ಞಾನ ವಿನಿಮಯದ ಮೂಲಕ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಸಂಕುಚಿತ ದೃಷ್ಟಿಕೋನದಿಂದ ದೂರವಿದ್ದು, ಆಯುರ್ವೇದದ ಮೂಲ ತತ್ವಗಳನ್ನು ಭದ್ರವಾಗಿ ಉಳಿಸಿಕೊಂಡೇ ವೈದ್ಯಕೀಯ ಸೇವೆ ಸಲ್ಲಿಸಬೇಕು. ನಿರಂತರ ಅಧ್ಯಯನ ಮತ್ತು ಪ್ರಾಯೋಗಿಕ ದೃಷ್ಟಿಕೋನ ಅಳವಡಿಸಿಕೊಂಡರೆ ವೈದ್ಯಕೀಯ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಸುರೇಖಾ ಪೈ, ಪಿಜಿ ಡೀನ್ ಮಂಜುನಾಥ್ ಭಟ್, ಯುಜಿ ಡೀನ್ ಸ್ವಪ್ನ ಕುಮಾರಿ, ಸಂಯೋಜಕರಾದ ವಿಜಯಲಕ್ಷ್ಮಿ ಹಾಗೂ ಸುರಭಿ ಕೃಷ್ಣ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗೀತಾ ಮಾರ್ಕೆಂಡೇಯ ನಿರೂಪಿಸಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಸುಶೀಲ ಶೆಟ್ಟಿ ಸ್ವಾಗತಿಸಿ, ಸ್ವಪ್ನ ವಂದಿಸಿದರು.