ಮೂಡುಬಿದಿರೆ: ಯಕ್ಷದೇವ ಮಿತ್ರ ಕಲಾ ಮಂಡಳಿ ಬೆಳುವಾಯಿ ವತಿಯಿಂದ 29ನೇ ವರ್ಷದ ಯಕ್ಷಗಾನ ಕಾರ್ಯಕ್ರಮವು ಜುಲೈ 17ರಂದು ಮೂಡುಬಿದಿರೆ ರಿಂಗ್ ರೋಡ್ ಸಮೀಪದ ಪ್ರೀತಮ್ ಗಾರ್ಡನ್ ಹಾಲ್‌ನಲ್ಲಿರುವ ಕಲಾವಿದ ಮಿಜಾರು ದಿ. ಕೆ. ಸುಬ್ರಾಯ ಭಟ್ ಕಲಾ ಸಭಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ತಾಳಮದ್ದಳೆ, ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ನಂದಳಿಕೆ ವಿಶಾಲ ಯಕ್ಷಕಲಾ ಬಳಗ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ವತಿಯಿಂದ ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ ಸಾರಥ್ಯದಲ್ಲಿ 160ನೇ ಯಕ್ಷಗಾನ ತಾಳಮದ್ದಳೆ ಸರಣಿಯ ಅಂಗವಾಗಿ 'ಕರ್ಣಾವಸಾನ' ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಬಲಿಪ ಶಿವಶಂಕರ ಭಟ್, ಗಿರೀಶ್ ರೈ ಕಕ್ಕಪದವು, ದೇವಾನಂದ ಭಟ್, ಶ್ರೀಧರ ವಿಟ್ಲ, ಗಣೇಶ್ ಮಯ್ಯ, ದಿವಿಜೇಶ್ ಭಟ್ ಹಾಗೂ ರವಿಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಎಂ. ಪ್ರಭಾಕರ ಜೋಶಿ, ಶ್ರುತಿಕೀರ್ತಿರಾಜ್ ಉಜಿರೆ, ಪವನ್ ಕಿರಣಕೆರೆ, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ ಹಾಗೂ ವಿಶ್ವಕರ್ಮ ವಾಟೇಪಡು ಪಾತ್ರ ನಿರ್ವಹಿಸಲಿದ್ದಾರೆ.

ಸಂಜೆ 4.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಎಸ್. ಭಟ್ ಜ್ಯೋತಿ ಬೆಳಗಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ತ್ರಣ್ಣ ಸಮ್ಮುಖ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೆ. ಅಭಯಚಂದ್ರ ಜೈನ್, ಉಮಾನಾಥ ಕೋಟ್ಯಾನ್, ರಾಮಕೃಷ್ಣ ಆಚಾರ್ಯ ಬನ್ನಡ್ಕ, ಯುವರಾಜ್ ಜೈನ್ , ಸುದರ್ಶನ್ ಎಂ., ಭಾಸ್ಕರ್ ಎಸ್. ಕೋಟ್ಯಾನ್, ಬಿ. ಶಿವಪ್ರಸಾದ್ ಹಾಗೂ ಸಂದೀಪ್ ಶೆಟ್ಟಿ ಬೆಳುವಾಯಿ ಭಾಗವಹಿಸಲಿದ್ದಾರೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಈ ಸಂದರ್ಭದಲ್ಲಿ ವನಜಾಕ್ಷಿ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಳಮದ್ದಳೆ ಅರ್ಥದಾರಿ ಹಾಗೂ ಸಂಘಟಕಿ ಪೂರ್ಣಿಮಾ ಪೇಜಾವರ ಅವರನ್ನು ಸನ್ಮಾನಿಸಲಾಗುವುದು. 2026ನೇ ಸಾಲಿನ ಯಕ್ಷ ದೇವ ಪ್ರಶಸ್ತಿಯನ್ನು ಪೆರ್ಡೂರು, ಸಿಗಂದೂರು ಮತ್ತು ಹಾಲಾಡಿ ಮೇಳಗಳ ವ್ಯವಸ್ಥಾಪಕ ಕರುಣಾಕರ ಶೆಟ್ಟಿ ಇಟ್ಟೆ ಹಾಗೂ ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ ಪುತ್ತೂರು ಅವರಿಗೆ ಪ್ರದಾನ ಮಾಡಲಾಗುವುದು.

ಸಂಜೆ 6 ಗಂಟೆಯಿಂದ ಶ್ರೀ ಕ್ಷೇತ್ರ ಹಾಲಾಡಿ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಪವನ್ ಕಿರಣಕೆರೆ ವಿರಚಿತ 'ಪಂಜರ ಪಕ್ಷಿ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ಗೌರವಾಧ್ಯಕ್ಷ ಕೆ. ಶ್ರೀಪತಿ ಭಟ್, ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಸ್ಥಾಪಕಾಧ್ಯಕ್ಷ ಎಂ. ದೇವಾನಂದ ಭಟ್, ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ಬಿ., ಡಾ. ಶ್ರುತಕೀರ್ತಿರಾಜ್ ಹಾಗೂ ಜೊತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಬೈಪಡಿತ್ತಾಯ ಸಹಿತ ಸಂಘಟನೆಯ ಪ್ರಮುಖರು ಉಪಸ್ಥಿತರಿರುವರು.