ಮೂಡುಬಿದಿರೆ: ಮೈಸೂರು ಜಿಲ್ಲೆಯ ಬೆಳಕು ಸೇವಾ ಫೌಂಡೇಶನ್ ವತಿಯಿಂದ ಪ್ರದಾನ ಮಾಡಲಾಗುವ ಪ್ರತಿಷ್ಠಿತ **'ರಾಜ್ಯಮಟ್ಟದ ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026' ಗೆ ಮೂಡುಬಿದಿರೆಯ ಸಮಾಜಸೇವಕ ಅನಿಲ್ ಮೆಂಡೋನ್ಸಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 19ರಂದು ಮೈಸೂರು ಜಿಲ್ಲೆಯ ತಿ. ನರಸೀಪುರದಲ್ಲಿ ನಡೆಯಲಿದೆ.
ಅನಿಲ್ ಮೆಂಡೋನ್ಸಾ ಕಳೆದ 18 ವರ್ಷಗಳಿಂದ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನಿರಾಶ್ರಿತರಿಗೆ 11 ಮನೆಗಳನ್ನು ನಿರ್ಮಿಸಿಕೊಡುವುದು, ಉಚಿತ ಆಂಬುಲೆನ್ಸ್ ಸೇವೆ ಒದಗಿಸುವುದು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸುವುದು, ಡಯಾಲಿಸಿಸ್ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು ನೀಡುವುದು ಸೇರಿದಂತೆ ವಿವಿಧ ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಸಾಮಾಜಿಕ ಸೇವೆಯೊಂದಿಗೆ ಅಂತರರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೂಡುಬಿದಿರೆ ತಾಲೂಕಿಗೆ ಕೀರ್ತಿ ತಂದಿರುವ ಅನಿಲ್ ಮೆಂಡೋನ್ಸಾ, ಧರ್ಮಾತೀತ ಸೇವಾ ಮನೋಭಾವ, ಸಾಮಾಜಿಕ ಬದ್ಧತೆ ಹಾಗೂ ಕ್ರೀಡಾ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಮಾಜಮುಖಿ ಕಾರ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯ ಮೂಲಕ ಅನಿಲ್ ಮೆಂಡೋನ್ಸಾ ಯುವಜನತೆಗೆ ಪ್ರೇರಣೆಯಾಗಿದ್ದು, ರಾಜ್ಯಮಟ್ಟದ 'ಬೆಳಕು ಕರ್ನಾಟಕ ಶ್ರೇಷ್ಠತಾ ಪ್ರಶಸ್ತಿ–2026'ಗೆ ಆಯ್ಕೆಯಾಗಿರುವುದು ಮೂಡುಬಿದಿರೆಗೆ ಮತ್ತೊಂದು ಹೆಗ್ಗಳಿಕೆಯಾಗಿದೆ.