ಮೂಡುಬಿದಿರೆ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಚರ್ಚ್‌ಗಳ ಪೈಕಿ ಕಾರ್ಮೆಲ್ ಮಾತೆಗೆ ಸಮರ್ಪಿತವಾಗಿರುವ ಏಕೈಕ ಶಿರ್ತಾಡಿ ಚರ್ಚ್‌ನಲ್ಲಿ ಕಾರ್ಮೆಲ್ ಮಾತೆಯ ಹಬ್ಬವನ್ನು ಆಚರಿಸಲಾಯಿತು.

ಹಬ್ಬದ ಅಂಗವಾಗಿ ನಡೆದ ಪ್ರಧಾನ ಬಲಿಪೂಜೆಯನ್ನು ಮಂಗಳೂರಿನ ಪ್ರಧಾನ ಧರ್ಮಗುರು ರೊಕ್ಕಿ ಡಿ'ಕುನ್ನಾ ನೆರವೇರಿಸಿದರು. ಪ್ರವಚನ ನೀಡಿದ ರೊಕ್ಕಿ ಡಿ'ಕುನ್ನಾ, ಮಾತೆ ಮರಿಯಾ ತನ್ನ ಪುತ್ರ ಯೇಸುವಿನ ಮೇಲಿನ ಭಕ್ತಿ, ಮಮತೆ ಮತ್ತು ಕಾಳಜಿಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಯೇಸುವಿನ ಕೃಪೆಗೆ ಪಾತ್ರರಾಗುವ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಶಿರ್ತಾಡಿ ಚರ್ಚಿನ ಧರ್ಮಗುರು ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ಮೂಡುಬಿದಿರೆ ವಾರ್ಡ್‌ನ ಧರ್ಮಗುರುಗಳು ಸೇರಿದಂತೆ ಒಟ್ಟು 19 ಧರ್ಮಗುರುಗಳು ಪಾಲ್ಗೊಂಡಿದ್ದರು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಆಸ್ಟಿನ್ ಡೆಸಾ, ಕಾರ್ಯದರ್ಶಿ ಸಿಲ್ವಿಯಾ ಡೆಸಾ, ವಿಲ್ಫ್ರೆಡ್ ಪಿಂಟೋ, ಜೊಯೆಲ್ ಸಿಕ್ವೇರಾ ಹಾಗೂ ಭಕ್ತರು ಉಪಸ್ಥಿತರಿದ್ದರು.